ಸೀವೆಜ್ ಫಾರಂನಲ್ಲಿ ನಾಗ್ಪುರ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜನ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ

ಮೈಸೂರು, ಮೇ 9- ನಾಗ್ಪುರ ಮಾದರಿಯಲ್ಲಿ ಮೈಸೂ ರಿನಲ್ಲೂ ವ್ಯವಸ್ಥಿತವಾಗಿ ಕಸ ವಿಲೇವಾರಿ, ಸಂಸ್ಕರಣೆ ಯನ್ನು ಜನ ಒಪ್ಪಿದರೆ, ನಮ್ಮದೇನು ತಕರಾರಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಸೀವೆಜ್ ಫಾರಂಗೆ ಸಂಬಂಧಿಸಿದ ಕಾಮಗಾರಿ ವಿಚಾರವಾಗಿ ಸಂಸದ ಪ್ರತಾಪ್‍ಸಿಂಹ ಹಾಗೂ ಎಸ್.ಎ.ರಾಮದಾಸ್ ನಡುವೆ ವಾಕ್ಸಮರ ನಡೆದಿದೆ ಎಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಎಸ್.ಎ.ರಾಮದಾಸ್, ಸಂಸದ ರಾದ ಪ್ರತಾಪ್‍ಸಿಂಹ ಅವರಿಗೂ ನನಗೂ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಅವರೇ ಹೇಳಿರು ವಂತೆ ನಾನು ಅವರ ಸಹೋದರ. ಕಳೆದ 25 ವರ್ಷ ಗಳಿಂದ ಮೈಸೂರು ಜಿಲ್ಲೆಯಲ್ಲಿ ಯಾವುದೇ ಜಿಲ್ಲಾ ಮಂತ್ರಿ ಏನು ಪ್ರಗತಿ ಮಾಡಿಲ್ಲವೆಂಬ ಅವರ ವಾದವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸ್ಥಳೀಯ ಪ್ರತಿನಿಧಿ ಯಾಗಿ ಪ್ರತಿಕ್ರಿಯಿಸಿದ್ದೇನೆ. ಕೆ.ಆರ್.ಕ್ಷೇತ್ರದ ಜನತೆಯ ಋಣ ತೀರಿಸುವ ಉದ್ದೇಶದಿಂದ ಅವರ ಕ್ಷೇಮಕ್ಕಾಗಿ ಸೂಯೇಜ್ ಫಾರಂನಿಂದ ಕಸ ವಿಲೇವಾರಿ ಘಟಕ ವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು, ಸಂಸದರಿಗೆ ಮನವಿ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

ನಾಗ್ಪುರದಲ್ಲಿರುವ ಕಸ ಸಂಸ್ಕರಣ ಘಟಕಗಳ ಕಾರ್ಯ ನಿರ್ವಹಣೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದರೆ, ಆ ಮಾದರಿಯಲ್ಲಿ ಯಾವುದೇ ಮಾಲಿನ್ಯಕ್ಕೆ ಆಸ್ಪದವಾಗ ದಂತೆ ನಿರ್ವಹಣೆ ಮಾಡುವ ನಂಬಿಕೆ ಇದ್ದರೆ ಅದಕ್ಕೆ ನಮ್ಮ ಸಹಕಾರವಿದೆ. ನಾಗ್ಪುರದಲ್ಲಿ ನಗರ ಪ್ರದೇಶದಿಂದ 10 ಕಿ.ಮೀ. ಹೊರವಲಯದಲ್ಲಿ 5 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿರುವಂತೆ, ಮೈಸೂರು ನಗರ ವ್ಯಾಪ್ತಿಯಿಂದ 8 ಕಿ.ಮೀ. ದೂರದ ಹೊರವಲಯದಲ್ಲಿರುವ ರಾಯನ ಕೆರೆಯಲ್ಲಿ ಈಗಾಗಲೇ ಸ್ವಾಧೀನಕ್ಕೆ ತೆಗೆದುಕೊಂಡಿರುವ 110 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಬಹುದು. ಅದು ಜನವಸತಿ ಪ್ರದೇಶವಲ್ಲದ ಕಾರಣ, ಅಲ್ಲಿ ಘಟಕ ಸ್ಥಾಪಿಸಲು ನಾನೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಮಂತ್ರಿಯಾಗಿದ್ದಾಗ 1996ರಲ್ಲಿ ಎಡಿಬಿ ಸಾಲದಿಂದ 200 ಟನ್ ಸಾಮಥ್ರ್ಯದ ಗೊಬ್ಬರ ಘಟಕವನ್ನು ಪ್ರಾರಂ ಭಿಸಿದರು. ಅದನ್ನು ವಿರೋಧಿಸಿ ಸಾವಿರಾರು ಜನ, ನೂರಾರು ರಾಸುಗಳನ್ನು ನಗರಪಾಲಿಕೆ ಆವರಣಕ್ಕೆ ನುಗ್ಗಿಸಿ, ಪ್ರತಿಭಟನೆ ಮಾಡಿದಾಗ ನಮ್ಮ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಾಗಿತ್ತು. 1997ರಲ್ಲಿ ಗೋಪಾಲಕರು ಮತ್ತು ನಾಗರಿಕ ವೇದಿಕೆ ಮೂಲಕ ಹೈಕೋರ್ಟ್‍ನಲ್ಲಿ ದಾವೆ ಹೂಡಿ ತ್ಯಾಜ್ಯ ಘಟಕಕ್ಕೆ ತಡೆ ಆಜ್ಞೆ ಕೋರಿದ್ದೆವು. ಆದರೆ ಅದಾಗಲೇ ಸರ್ಕಾರ ಎಡಿಬಿ ಸಾಲ ಪಡೆದು, ಬಡ್ಡಿ ಪಾವತಿಸುತ್ತಿದ್ದ ಕಾರಣ ಯೋಜನೆ ಕೈಬಿಡಲಾಗಲಿಲ್ಲ. ಬದಲಾಗಿ ಹತ್ತು ವರ್ಷಗಳ ನಂತರ ಬೇರೆಡೆಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು.

ಹೆಚ್ಚು ವಾಸನೆ ಬರುತ್ತಿದ್ದ ಕಾರಣ 2010ರಲ್ಲಿ ನಾನು ಜಿಲ್ಲಾ ಮಂತ್ರಿಯಾಗಿದ್ದಾಗ 87 ಲಕ್ಷ ರೂ. ವೆಚ್ಚದಲ್ಲಿ ಹೈ ರೈಸ್ ಕರ್ಟನ್ ಅಳವಡಿಸಲಾಯಿತು. ಅಲ್ಲಿದ್ದ 7.50 ಲಕ್ಷ ಟನ್ ಕಸವನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಿ ಅದರ ಮೇಲೆ ಕ್ಯಾಪಿಂಗ್ ಮಾಡಿ ನೆಟ್ಟಿದ್ದ 5 ಸಾವಿರ ಗಿಡ ಗಳೀಗ ಮರಗಳಾಗಿವೆ. ಜೆಎನ್‍ಯುಆರ್‍ಎಂ ಯೋಜನೆ ಯಡಿ ಎಲ್ಲಾ ವಾರ್ಡ್‍ಗಳಲ್ಲಿ ಒಂದೊಂದು ಕಸ ವಿಂಗ ಡಣಾ ಕೇಂದ್ರ ಹಾಗೂ ನಗರದ 9 ಕಡೆ ಕಸ ಸಂಸ್ಕರಣಾ ಘಟಕ ನಿರ್ಮಿಸಲಾಯಿತು. ಪರಿಣಾಮ ಸೂಯೇಜ್ ಫಾರಂ ಮೇಲಿನ ಒತ್ತಡ ಕಡಿಮೆಯಾಯಿತು. ಅಲ್ಲದೆ ಶಾಶ್ವತ ಪರಿಹಾರಕ್ಕಾಗಿ ರಾಯನಕೆರೆಯ 110 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು, ಯೋಜನೆ ಸಿದ್ಧಪಡಿಸಲಾಯಿತು. ಆದರೆ 2015ರಿಂದ ಜೆಎನ್‍ಯು ಆರ್‍ಎಂ ಯೋಜನೆ ಕುಂಠಿತವಾಗಿ ಪ್ರಕ್ರಿಯೆ ಸ್ಥಗಿತ ವಾಯಿತು. ಪರಿಣಾಮ ಪ್ರತಿನಿತ್ಯ 500-600 ಟನ್ ಕಸ ನೇರವಾಗಿ ಸೂಯೇಜ್ ಫಾರಂಗೆ ಬರುವಂತಾಯ್ತು.  ಲಕ್ಷ ಲಕ್ಷ ಟನ್ ಕಸ ಶೇಖರಣೆಯಾಯ್ತು. 2017-18ರಲ್ಲಿ ಆಮರಣಾಂತ ಉಪವಾಸವನ್ನೂ ನಡೆಸಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದೆ. ನಂತರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯೂ ಪ್ರಕರಣ ದಾಖಲಿಸಿತು. ಹಲವು ಪ್ರಕ್ರಿಯೆ ಬಳಿಕ 2022ರೊಳಗೆ ಸೂಯೇಜ್ ಫಾರಂನಲ್ಲಿನ ಕಸ ವಿಲೇವಾರಿ ಘಟಕ ವನ್ನು ಪೂರ್ಣವಾಗಿ ಮುಚ್ಚಬೇಕೆಂದು ನಾವು ಕೋರಿ ದ್ದೇವೆ ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.