ಡಾ. ರಾಜ್‍ಕುಮಾರ್ ಅಪಹರಣ ಪ್ರಕರಣ ಎಲ್ಲಾ 9 ಆರೋಪಿಗಳು ಖುಲಾಸೆ

ಈರೋಡ್: ಕನ್ನಡ ವರನಟ ಡಾ. ರಾಜ್‍ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 9 ಮಂದಿಯನ್ನು ಖುಲಾಸೆಗೊಳಿಸಿ ಈರೋಡು ಜಿಲ್ಲೆಯ ಗೋಪಿಚೆಟ್ಟಿ ಪಾಳ್ಯಂ ನ್ಯಾಯಾಲಯದ ನ್ಯಾಯಾಧೀಶರಾದ ಮಣಿ ಅವರು ಇಂದು ತೀರ್ಪು ನೀಡಿದರು.

ರಾಜ್‍ಕುಮಾರ್ ಅಪಹರಣ ಪ್ರಕರಣ ವನ್ನು ದಾಖಲಿಸಿಕೊಂಡಿದ್ದ ತಾಳವಾಡಿ ಪೊಲೀಸರು, ವೀರಪ್ಪನ್ ಸೇರಿದಂತೆ 14 ಮಂದಿ ವಿರುದ್ಧ ಕಳೆದ 7 ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವೀರಪ್ಪನ್, ಸೇತುಕುಳಿ ಗೋವಿಂದ ಮತ್ತು ಚಂದ್ರೇಗೌಡ 2004ರಲ್ಲಿ ಎಸ್‍ಟಿಎಫ್ ಗುಂಡಿಗೆ ಬಲಿಯಾಗಿದ್ದರು. ಮಲ್ಲು ಎಂಬ ಆರೋಪಿ ಈಗಾಗಲೇ ಮೃತಪಟ್ಟಿದ್ದು, ರಮೇಶ್ ಎಂಬಾತ ಇನ್ನೂ ಪೊಲೀಸರಿಗೆ ಸಿಕ್ಕದೇ ತಲೆಮರೆಸಿಕೊಂಡಿದ್ದಾನೆ. ಈ ಕಾರಣದಿಂದಾಗಿ ಅವರನ್ನೆಲ್ಲಾ ಕೈಬಿಟ್ಟು, ಉಳಿದ 9 ಮಂದಿಯ ವಿಚಾರಣೆ ನಡೆಯಿತು. ಈ ಆರೋಪಿಗಳೆಲ್ಲರೂ ನ್ಯಾಯಾಲಯ ದಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ವಿಚಾರಣೆ ಎದುರಿಸುತ್ತಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಏಳುಮಲೈ, ಬಸವಣ್ಣ, ಸೆಲ್ವಂ ಅಲಿಯಾಸ್ ಸತ್ಯ, ಅಮೃತಲಿಂಗಂ, ನಾಗರಾಜು, ಕಲ್ಮಂಡಿ ಪುರಂ ರಾಮನ್, ಮಾರನ್, ಗೋವಿಂದ ರಾಜು ಮತ್ತು ಪುಟ್ಟಸ್ವಾಮಿ ಎಂಬು ವರನ್ನು ನ್ಯಾಯಾಧೀಶರು ಖುಲಾಸೆಗೊಳಿ ಸಿದರು. ಇಂದು ಪುಟ್ಟಸ್ವಾಮಿ ಹೊರತು ಪಡಿಸಿ ಉಳಿದ ಎಲ್ಲಾ 8 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ರಾಜ್‍ಕುಮಾರ್ ಅಪಹರಣವಾದ ವೇಳೆ ಅವರ ಜೊತೆಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು, ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗದಿರುವ ಬಗ್ಗೆ ನ್ಯಾಯಾಧೀಶರು ಆಕ್ಷೇಪಿಸಿದ್ದರು. ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿರುವ ಪಾರ್ವತಮ್ಮ ಅವರು ತನಿಖೆಗೆ ಸಹಕರಿಸದೇ, ಸಾಕ್ಷ್ಯ ನುಡಿಯಲೂ ಕೂಡ ಬರದೇ ಇದ್ದುದು ಯಾಕೆ? ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ನ್ಯಾಯಾಧೀಶರು ತಮಿಳುನಾಡು ಸರ್ಕಾರವನ್ನು ಪ್ರಶ್ನಿಸಿದರು. ಉಳಿದಂತೆ ಎಲ್ಲಾ ಸಾಕ್ಷಿಗಳು ಗೊಂದಲಮಯವಾದ ಹೇಳಿಕೆಗಳನ್ನು ನೀಡಿದ್ದು, ಅವರ ಹೇಳಿಕೆಗಳು ನಂಬಲರ್ಹವಾಗಿಲ್ಲ. ಈ ಆರೋಪಿಗಳು ವೀರಪ್ಪನ್ ಸಹಚರರು ಎಂಬುದಕ್ಕೆ ಯಾವುದೇ ರೀತಿಯ ಆಧಾರಗಳಿಲ್ಲ. ಅಲ್ಲದೇ ಬೇರೆ ಕೇಸ್‍ಗಳಿಗೆ ಸಂಬಂಧಪಟ್ಟ ಬಂದೂಕುಗಳನ್ನು ಈ ಪ್ರಕರಣದಲ್ಲಿ ಹಾಜರುಪಡಿಸಲಾಗಿದೆ ಎಂದು ತಮ್ಮ ತೀರ್ಪಿನಲ್ಲಿ ತಿಳಿಸಿರುವ ನ್ಯಾಯಾಧೀಶರು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ವಿವರ: 2000ನೇ ವರ್ಷ ಜುಲೈ 30ರಂದು ಅಮಾವಾಸ್ಯೆಯ ದಿನ ತಮಿಳುನಾಡಿನ ತಾಳವಾಡಿ ಸಮೀಪದಲ್ಲಿರುವ ದೊಡ್ಡಗಾಜನೂರಿನ ಮನೆಯಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಇದ್ದರು. ಅಂದು ರಾತ್ರಿ ಮನೆಗೆ ನುಗ್ಗಿದ ವೀರಪ್ಪನ್ ತಂಡ ರಾಜ್‍ಕುಮಾರ್, ಅವರ ಅಳಿಯ ಗೋವಿಂದರಾಜು, ನಾಗೇಶ್ ಮತ್ತು ನಾಗಪ್ಪ ಮಾರಡಗಿ ಅವರನ್ನು ಅಪಹರಿಸಿ, ಪಾರ್ವತಮ್ಮ ರಾಜ್‍ಕುಮಾರ್ ಮೂಲಕ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಹಲವಾರು ಬೇಡಿಕೆಗಳುಳ್ಳ ಕ್ಯಾಸೆಟ್‍ವೊಂದನ್ನು ವೀರಪ್ಪನ್ ಕಳುಹಿಸಿದ್ದ. ಡಾ. ರಾಜ್‍ಕುಮಾರ್ ಅಪಹರಣ ತಮಿಳುನಾಡಿನಲ್ಲಿ ನಡೆದಿದ್ದ ಕಾರಣ ಕರ್ನಾಟಕ ಸರ್ಕಾರವು ತಮಿಳುನಾಡು ಸರ್ಕಾರದ ಮೊರೆ ಹೋಗಿತ್ತು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರೂ ಕೂಡ ಸ್ಪಂದಿಸಿದ್ದರು. ಮೊದಲಿಗೆ ನಕ್ಕೀರನ್ ಗೋಪಾಲ್ ತಂಡ ವೀರಪ್ಪನ್ ಬಳಿಗೆ ತೆರಳಿ ಸಂಧಾನದ ಮಾತುಕತೆ ನಡೆಸಿತಾದರೂ, ನಕ್ಕೀರನ್ ಗೋಪಾಲ್ ವೀರಪ್ಪನ್ ಜೊತೆಗಿದ್ದಾಗಲೇ ನಾಗಪ್ಪ ಮಾರಡಗಿ ವೀರಪ್ಪನ್‍ನಿಂದ ತಪ್ಪಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಸಂಧಾನ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಅಂತಿಮವಾಗಿ ನೆಡುಮಾರನ್ ನೇತೃತ್ವದ ತಂಡ ನಡೆಸಿದ ಸಂಧಾನ ಯಶಸ್ವಿಯಾಗಿ 108 ದಿನಗಳ ನಂತರ ಡಾ. ರಾಜ್‍ಕುಮಾರ್ ಸುರಕ್ಷಿತವಾಗಿ ಬಿಡುಗಡೆಯಾಗಿದ್ದರು.