ಪೌರಕಾರ್ಮಿಕರ ಜಮೀನು ಕಬಳಿಸಲು ಸಂಚು ಆರೋಪ; ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಪ್ರತಿಭಟನೆ

ಮೈಸೂರು, ಆ.29(ಪಿಎಂ)- ಹುಣಸೂರು ತಾಲೂ ಕಿನ ಮಾರನಹಳ್ಳಿ ಪೆರಿಯಾರ್ ಬಡಾವಣೆಯ ಪೌರಕಾರ್ಮಿಕ ರಿಗೆ ಸೇರಿದ 12 ಎಕರೆ ಜಮೀನನ್ನು ಕಬಳಿಸಲು ಬಲಾಡ್ಯರು ಸಂಚು ನಡೆಸಿದ್ದಾರೆಂದು ಆರೋಪಿಸಿ ಹಾಗೂ ಅರುಂ ಧತಿಯಾರ್ ಸಮುದಾಯಕ್ಕೆ ಶೇ.3ರಷ್ಟು ಒಳಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿ ಯಾರ್ ಮಹಾಸಭಾದಿಂದ ಶನಿವಾರ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಬಡಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅರುಂಧತಿ ಯಾರ್ ಸಮುದಾಯದ 15 ಪೌರಕಾರ್ಮಿಕ ಕುಟುಂಬಗಳು ವಾಸಿಸುತ್ತಿವೆ. ಇವರ ಪೂರ್ವಿಕರು ಮಾರನಹಳ್ಳಿ ಸರ್ವೆ ನಂ.16, ಎಲೆಚನಹಳ್ಳಿ ಸರ್ವೆ ನಂ.1ರಲ್ಲಿನ ಒಟ್ಟು 12 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ಈ ಸಂಬಂಧ ಕೈಬರಹದ ಆರ್‍ಟಿಸಿ ದಾಖಲೆಯೂ ಇದೆ. ಪೂರ್ವಿಕರ ಮರಣ ನಂತರ ಅವರ ವಾರಸುದಾರರಾದ ಪೌರಕಾರ್ಮಿ ಕರು ಸದರಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇದೀಗ ದೇವಮ್ಮ ಮತ್ತು ಕುಟುಂಬದವರು ಈ 12 ಎಕರೆ ಜಮೀನು ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, ಪೌರಕಾರ್ಮಿಕರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೇವಮ್ಮ ಸುಳ್ಳು ದೂರು ದಾಖಲಿಸಿದ್ದಾರೆ. ಸದರಿ ಜಮೀನು ಸಂಬಂಧ ದೇವಮ್ಮ ಅವರಿಗೆ ದಾಖಲೆ ಸೃಷ್ಟಿಸಲು ಸಹಕರಿಸುತ್ತಿರುವ ಕಂದಾಯ ಇಲಾಖೆ ಅಧಿಕಾರಿ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಮೀನು ಕಬಳಿಸಲು ದೇವಮ್ಮ ಮತ್ತು ಅವರ ಕುಟುಂಬದವರು ಬಾಡಿಗೆ ರೌಡಿಗಳ ಮೂಲಕ ಪೌರಕಾರ್ಮಿಕರಿಗೆ ಕೊಲೆ ಬೆದರಿಕೆ ಹಾಕಿಸಿದ್ದು, ಈ ಬಾಡಿಗೆ ರೌಡಿಗಳನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ತಿ.ನರಸೀಪುರ ತಾಲೂಕಿನ ಹನುಮನಾಳದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ಮಡಿದ ಮುರುಗನ್ ಸಾವಿಗೆ ಕಾರಣ ರಾದ ಪಿಡಿಒವನ್ನು ಬಂಧಿಸಿ, ಮುರುಗನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಅರುಂಧತಿಯಾರ್ ಮಹಾಸಭಾ ಅಧ್ಯಕ್ಷ ಆರ್.ಕೃಷ್ಣ, ರಾಜ್ಯ ಗೌರವಾಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಕೆ.ಪಳನಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ರವಣ್ಣಯ್ಯ, ಜಿಲ್ಲಾಧ್ಯಕ್ಷ ಹೆಚ್.ಧರ್ಮರಾಜ್ ಸೇರಿದಂತೆ ಪೆರಿಯಾರ್ ಗ್ರಾಮದ ಸಫಾಯಿ ಕರ್ಮಚಾರಿಗಳು ಪ್ರತಿಭಟನೆಯಲ್ಲಿದ್ದರು.