ಮೈಸೂರಲ್ಲೂ ಮೈತ್ರಿ ಮುನಿಸು

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಪರ ಕೆಲಸ ಮಾಡಲು ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಸಂಬಂಧ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಲೀ ರುಚಿ ಹೋಟೆಲಿ ನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಇಂದು ಕರೆದಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಸಚಿವರಿಬ್ಬರ ಸಮ್ಮುಖದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಯಿತು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರು ಮಾತನಾಡುತ್ತಿದ್ದಂತೆಯೇ ಪ್ರತಿರೋಧ ವ್ಯಕ್ತಪಡಿ ಸಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯ ಕರ್ತರು, ಅಟ್ರಾಸಿಟಿ ಕೇಸ್ ಹಾಕಿಸಿಕೊಂಡು ನಾವು ಕೋರ್ಟ್‍ಗೆ ಅಲೆಯುತ್ತಿರುವುದು ನಿಮಗೂ ಗೊತ್ತಿದೆ. ನಮ್ಮ ಬಸ್ಸು, ಲಾರಿಗಳನ್ನು ಸೀಜ್ ಮಾಡಿಸಿ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಅಧಿಕಾರದಲ್ಲಿದ್ದವರು ನಡೆಸಿಕೊಂಡ ಹೀನಾಯ ಪರಿಸ್ಥಿತಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಇಷ್ಟು ಬೇಗ ಮರೆಯುವುದಿಲ್ಲ. ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯ ಕರ್ತರು ಅನುಭವಿಸಿದ ನೋವು ಮಾಸದಿರು ವಾಗ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿ ಎಂದರೆ ಮನಸ್ಸಾದರೂ ಹೇಗೆ ಬರುತ್ತದೆ? ಎಂದು ಕಾರ್ಯಕರ್ತರು ಏರು ಧನಿಯಲ್ಲಿ ಪ್ರಶ್ನಿಸಿದರು.

ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಬಾವುಟ ಹಿಡಿದೇ ಕೆಲಸ ಮಾಡುತ್ತಿರುವಾಗ ಇಲ್ಲಿ ಮಾತ್ರ ನಾವು ಮೈತ್ರಿ ಧರ್ಮ ಪಾಲಿಸಬೇಕಾ? ಎಂದು ಸಚಿವರು, ಜೆಡಿಎಸ್ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಮೇಲಿನ ಹಂತದಲ್ಲಿ ಮಾಡಿ ಕೊಂಡಿರುವ ಮೈತ್ರಿ ಧರ್ಮ ಪಾಲನೆ ಮಾಡಲು ನಮ್ಮ ಮನಸ್ಸುಗಳು ಒಪ್ಪುತ್ತಿಲ್ಲ ಎಂದು ಖಂಡ ತುಂಡವಾಗಿ ನುಡಿದರು.

ಇದರಿಂದ ಸಭೆಯಲ್ಲಿ ಗದ್ದಲ, ನೂಕಾಟ-ತಳ್ಳಾಟ, ಮಾತಿನ ಚಕಮಕಿ ನಡೆಯಿತು. ವಾಗ್ವಾದಕ್ಕೂ ಇಳಿದಾಗ ಸಚಿವ ಜಿ.ಟಿ.ದೇವೇಗೌಡರು ಸಮಾಧಾನಪಡಿಸಲೆತ್ನಿಸಿದರಾ ದರೂ ಪರಿಸ್ಥಿತಿ ತಹಬದಿಗೆ ಬಾರದ ಕಾರಣ ಸ್ಥಳದಲ್ಲಿ ಕೆಲ ಸಮಯ ಉದ್ವಿಗ್ನ ವಾತಾವರಣ ಉಂಟಾಯಿತು. ಈ ನಡುವೆ ಕೆಲವರು ಮೋದಿಗೆ ಜೈ ಎಂಬ ಘೋಷಣೆ ಯನ್ನು ಕೂಗಲಾರಂಭಿಸಿದಾಗ ಕಾರ್ಯಕರ್ತರ ನಡುವೆಯೇ ಮಾತಿನ ಚಕಮಕಿ ನಡೆಯಿತು. ಅವರನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ ಮತ್ತೊಮ್ಮೆ ನೂಕಾಟ-ತಳ್ಳಾಟ ನಡೆದು ಇಡೀ ಸಭಾಂಗಣ ಗೊಂದಲ-ಗದ್ದಲಮಯವಾಯಿತು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದಂತೆಯೇ ಜಿ.ಟಿ.ದೇವೇಗೌಡರು ವೇದಿಕೆಯಿಂದಿಳಿದು ಬಂದು ಕಾರ್ಯಕರ್ತರನ್ನು ಸಮಾಧಾನಪಡಿಸಿ, ಕೂರಿಸಲು ಹರಸಾಹಸ ಪಟ್ಟರು.

ಕಡೆಗೆ ಹೇಗೋ ಶಾಂತ ಪರಿಸ್ಥಿತಿ ನೆಲೆಸಿದಾಗ ಸಚಿವರು, ನಿಮ್ಮ ಕಿಚ್ಚು, ಆಕ್ರೋಶ, ದುಗುಡ, ಅಸಮಾಧಾನ ಏನು ಅಂತ ನನಗೆ ಗೊತ್ತಿದೆ, ನನಗೂ ಆ ನೋವಿದೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮುಂದುವರಿಯಲು ಹಾಗೂ ಕೇಂದ್ರದಲ್ಲಿ ಬಡವರ ಪರ ಸರ್ಕಾರ ರಚಿಸಲು ಎರಡೂ ಪಕ್ಷಗಳ ವರಿಷ್ಠರ ತೀರ್ಮಾನದಂತೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹಳೆಯ ಕಹಿ ನೆನಪುಗಳನ್ನು ಬದಿಗಿರಿಸಿ ಮೈತ್ರಿ ಅಭ್ಯರ್ಥಿಗಳ ಪರ ಕೆಲಸ ಮಾಡ ಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಮನದಟ್ಟು ಮಾಡಿಸಿದರು.

ಅಗತ್ಯ ಬಿದ್ದರೆ ಮತ್ತೊಮ್ಮೆ ಸಭೆ ಏರ್ಪಡಿಸಿ ನಿಮ್ಮ ಭಾವನೆಗಳ ಕುರಿತು ಚರ್ಚೆ ಮಾಡುತ್ತೇನೆ. ಈಗ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಕೆಲಸ ಮಾಡುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಮನವಿ ಮಾಡಿದ ಜಿ.ಟಿ.ದೇವೇಗೌಡರು, ಯಾರೊಬ್ಬರ ಅಭಿಪ್ರಾಯವ್ಯಕ್ತಪಡಿಸಲು ಅವಕಾಶ ನೀಡದೆ ಬುದ್ದಿವಂತಿಕೆಯಿಂದ ಎಲ್ಲರೂ ಯುಗಾದಿ ಹಬ್ಬವನ್ನು ಸುಖ-ಸಂಭ್ರಮದಿಂದ ಆಚರಿಸಿ ಎಂದು ಶುಭಾಶಯ ಕೋರಿ ಸಭೆಯನ್ನು ಮುಕ್ತಾಯಗೊಳಿಸಿದರು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಅಶ್ವಿನ್ ಕುಮಾರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಿನಕಲ್ ರಾಜಣ್ಣ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಜಿ.ಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

ಹಿಂದಿನ ನೋವನ್ನು ಮರೆತು ಸಹಕರಿಸಿ
ಮೈಸೂರು: ಹಿಂದಿನ ನೋವು, ಕಿಚ್ಚನ್ನು ಮರೆತು ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿ. ನಿಮ್ಮ ನೋವೇನೆಂಬುದು ನನಗೆ ಗೊತ್ತು. ನಿಮ್ಮಂತೆ ನಾನೂ ಸಹ ನೋವನ್ನ ನುಭವಿಸಿದ್ದೇನೆ. ಹೋರಾಟ ಮಾಡಿ ನನ್ನನ್ನು ಹೆಚ್ಚು ಅಂತರದಿಂದ ಗೆಲ್ಲಿಸಿರುವ ನಿಮ್ಮ ಭಾವನೆ ನನಗೆ ತಿಳಿದಿದೆ ಎಂದು ಜಿ.ಟಿ.ದೇವೇಗೌಡರು ನುಡಿದರು.

ಖಾಸಗಿ ಹೋಟೆಲ್‍ನಲ್ಲಿ ಚಾಮುಂಡೇ ಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತ ನಾಡಿದ ಅವರು, ಬದಲಾದ ಪರಿಸ್ಥಿತಿ ಯಲ್ಲಿ ಈಗ ನಾವು ಕಹಿ ನೆನಪುಗಳನ್ನು ಮರೆತು ವರಿಷ್ಠರ ತೀರ್ಮಾನದಂತೆ ರಾಜ್ಯ ಸರ್ಕಾರದ ಭದ್ರತೆ ಹಾಗೂ ಕೇಂದ್ರದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಪಾಲನೆ ಅನಿವಾರ್ಯ ವಾಗಿದೆ. ಈ ಮೈತ್ರಿ ಸರ್ಕಾರವನ್ನು ದುರ್ಬಲ ಗೊಳಿಸಲು ಹಲವು ಬಾರಿ ಪ್ರಯತ್ನ ನಡೆ ದದ್ದನ್ನು ನೀವು ನೋಡಿದ್ದೀರಿ. ಕುಮಾರ ಸ್ವಾಮಿ ಅವರು ಇನ್ನೂ 4 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದು ವರಿಯ ಬೇಕೆಂಬುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಸಚಿವರು ನುಡಿದರು. ನಿಮ್ಮ ಕಿಚ್ಚು, ಅಸಮಾಧಾನ, ಕಾಂಗ್ರೆಸ್‍ನವರ ತಪ್ಪಿನ ಬಗ್ಗೆ ನಾನು ಸಿದ್ದರಾಮಯ್ಯರಿಗೆ ವಿವರಿಸಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿ ಮಾಡಿ ದಾಗಲೂ ಹೇಳಿದ್ದೇನೆ. ತಪ್ಪುಗಳನ್ನು ಸರಿಪಡಿ ಸುತ್ತೇವೆಂದು ತಿಳಿಸಿದ್ದಾರೆ. ಅಪಸ್ವರ ಎತ್ತದೆ ಹೆಚ್.ಡಿ.ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಅವರ ನಿರ್ದೇಶನದಂತೆ ಸಹಕರಿಸಿ. ಏಪ್ರಿಲ್ 7ರಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮೈಸೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಜೊತೆ ಯಾಗಿ ಚುನಾವಣಾ ಪ್ರಚಾರ ಮಾಡುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಸನ-ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಲಿದ್ದಾರೆ.
ಬೆಂಬಲಿಸಬೇಕಾದ ಅನಿವಾರ್ಯತೆ: ಆರಂಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್, ಭಿನ್ನಮತವಿರಬಹುದು, ವಿಧಾನಸಭೆಯಲ್ಲಿ ನಮ್ಮ ಬಾವುಟ ಹಿಡಿದು ಕೆಲಸ ಮಾಡಿದ ನೀವು ಈಗ ಅನಿವಾರ್ಯವಾಗಿ ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೊಂದಿಗೆ ಮಾತನಾಡಿ, ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ, ಡಾ. ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದರು. 10 ತಿಂಗಳ ಮೈತ್ರಿ ಸರ್ಕಾರದಲ್ಲಿ ಸಿಎಂ ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ನಾವು 7 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದರೂ, ಲೋಕಸಭಾ ಚುನಾವಣೆಯ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳೂ ನಮ್ಮವರೇ ಎಂದು ತಿಳಿದುಕೊಳ್ಳಬೇಕು ಎಂದರು.

ನಾಯಕರ ಸೂಚನೆಯಂತೆ ಮೈತ್ರಿ: ಸಚಿವ ಸಾ.ರಾ.ಮಹೇಶ್ ಮಾತನಾಡಿ, ಪಕ್ಷದ ನಾಯಕರ ಸೂಚನೆಯಂತೆ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ವೈಮನಸ್ಸು ತೊರೆದು ಕೆಲಸ ಮಾಡಿ. ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರು ಜಿ.ಟಿ. ದೇವೇಗೌಡ ರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಕೊಡು-ಕೊಳ್ಳು ನೀತಿಯಂತೆ ನಾವು ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ನಂತರ ಮಾತನಾಡಿದ ಮರಿತಿಬ್ಬೇಗೌಡರು, ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಉದ್ದೇಶ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿತ್ತು. ಸಮ್ಮಿಶ್ರ ಸರ್ಕಾರ ಬಂದು 10 ತಿಂಗಳಾಯಿತು. ಹಲವು ಜನಪರ ಯೋಜನೆಗಳ ಜಾರಿಗೊಳಿಸಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇನ್ನೂ ನಾಲ್ಕು ವರ್ಷ ಇರಬೇಕು. ಕೇಂದ್ರದಲ್ಲಿ ಬಡವರ ಸರ್ಕಾರ ಬರಬೇಕಾಗಿದೆ. ಅದಕ್ಕಾಗಿ ನಾವು ಈ ಚುನಾವಣೆಯಲ್ಲಿ ನೋವು, ಸಂಕಟ ಮರೆತು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.