ಆಪರೇಷನ್ ಕಮಲ ಕಾರ್ಯಾಚರಣೆ ವಿವರಣೆ ಕೇಳಿದ ಅಮಿತ್ ಷಾ

ಬೆಂಗಳೂರು:  ಕರ್ನಾಟಕದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಮೀಟರ್ ಬಡ್ಡಿ, ಮಟ್ಕಾ ಹಾಗೂ ಇಸ್ಪೀಟ್ ದಂಧೆಕೋರ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಕಾರ್ಯಾಚರಣೆಗಿಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಂದ ಮಾಹಿತಿ ಕೇಳಿದ್ದಾರೆ.

ಕುಮಾರಸ್ವಾಮಿ ಅವರೇ ಕಿಂಗ್ ಪಿನ್ಗಳ ಬಗ್ಗೆ ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡಿದ ನಂತರವೂ ಅವರೇ ಸರ್ಕಾರ ಉರುಳಿಸಲು ಹೊರಟಿದ್ದಾರೆ ಎನ್ನುವುದನ್ನು ನೀವು ಮತ್ತೊಮ್ಮೆ ನಿಜ ಮಾಡಿದ್ದೀರಿ. ಮದುವೆ ಸಮಾರಂಭವೊಂದಕ್ಕೆ ನೀವು ಗಣ್ಯ ವ್ಯಕ್ತಿಗಳಾಗಿ ಹೋಗಿದ್ದೀರಿ, ಈ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಹೊರಟಿರುವ ಕಿಂಗ್‍ಪಿನ್‍ಗಳನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ಎಷ್ಟರ ಮಟ್ಟಿಗೆ ಸರಿ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭ ದಲ್ಲಿ ರಾಷ್ಟ್ರ ಮಟ್ಟದಲ್ಲಿ ಈ ನಡವಳಿಕೆ ನಮ್ಮ ಪಕ್ಷಕ್ಕೆ ಭಾರೀ ಹಾನಿ ಉಂಟು ಮಾಡಿದೆ. ಇಂತಹವರನ್ನು ಕಟ್ಟಿಕೊಂಡು ಸರ್ಕಾರ ಉರುಳಿಸಲು ಮುಂದಾಗ ಬೇಡಿ. ಮೈತ್ರಿ ಪಕ್ಷಗಳಲ್ಲೇ ಅತೃಪ್ತಿ ಹೊಗೆಯಾಡುತ್ತಿದೆ. ಅವರೇ ಕೆಳಗೆ ಬೀಳುವಾಗ ನಾವು ಮಧ್ಯ ಪ್ರವೇಶಿಸಿ, ಕೆಟ್ಟ ಹೆಸರು ತಂದುಕೊಳ್ಳುವುದು ಬೇಡ ಎಂದರು.