ಕೆಂದಾರೆ ಹಳ್ಳದಲ್ಲಿ ಆನೆ ಕಳೇಬರ ಪತ್ತೆ

ಹನೂರು,ಏ.18-ಮಲೆ ಮಹದೇಶ್ವರ ವನ್ಯಜೀವಿ ವಲಯ ವಿಭಾಗದ ಪೊನ್ನಾಚಿ ಅರಣ್ಯ ಪ್ರದೇಶ ಮರೂರು ಬೀಟ್‍ನ ಕೆಂದಾರೆ ಹಳ್ಳದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಈ ಭಾಗ ದಲ್ಲಿ 5 ಆನೆಗಳ ಕಳೇಬರ ಪತ್ತೆಯಾಗಿದ್ದು, ಆನೆಗಳು ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಅಕ್ರಮ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುತ್ತಿರುವುದು ಪ್ರಾಣಿ ಪ್ರಿಯರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಾಡಾನೆಗಳು ಮೇವು, ನೀರಿನಿಂದ ಮೃತಪಡುತ್ತಿವೆಯೇ ಅಥವಾ ಬೇರೆ ಇನ್ಯಾವ ಕಾರಣಗಳಿಂದ ಮೃತಪಡುತ್ತಿವೆ ಎಂಬುದನ್ನು ಅರಿತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಸುವಿನ ಕಳೇಬರ ಪತ್ತೆ: ಚಿರತೆ ದಾಳಿ ಶಂಕೆ

ಮಡಿಕೇರಿ, ಏ.18- ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದ ಚೋಕಂಡ ರಮೇಶ್ ಎಂಬುವರ ಕಾಫಿ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ. ಚಿರತೆ ದಾಳಿಯಿಂದ ಹಸು ಪ್ರಾಣ ಕಳೆದುಕೊಂಡಿಬಹು ದೆಂದು ಅರಣ್ಯ ಇಲಾಖೆ ಅಧಿಕಾರಿ ಸಂಶಯ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ: ಶುಕ್ರವಾರ ಬೆಳಿಗ್ಗೆ ಸಮೀಪದ ಕೊಮ್ಮೆತೊಡು ಗ್ರಾಮದ ಹಮೀದ್ ಎಂಬುವರಿಗೆ ಸೇರಿದ ಹಸು ಮತ್ತು ಕರುವನ್ನು ತಮ್ಮ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಆದರೆ ರಾತ್ರಿಯಾದರೂ ಕೂಡ ಹಸು ಕೊಟ್ಟಿಗೆಗೆ ಬಾರದ ಕಾರಣ ಹಮೀದ್ ಅಕ್ಕ ಪಕ್ಕದಲ್ಲಿ ವಿಚಾರಿಸಿದ್ದರು. ಶನಿವಾರ ಬೆಳಗ್ಗೆ ಚೋಕಂಡ ರಮೇಶ್ ಅವರು ತಮ್ಮ ಕಾಫಿ ತೋಟದಲ್ಲಿ ಮರ ಕಾಪತು ಮಾಡಲು ಕೆಲಸಗಾರರಿಗೆ ತೋಟ ತೋರಿಸಲು ಬಂದಾಗ ತೋಟದಲ್ಲಿ ಹಸು ಸತ್ತು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ರಮೇಶ್ ಅವರು ಅರಣ್ಯ ಅಧಿಕಾರಿ ಗಳಿಗೆ ವಿಷಯ ತಿಳಿಸಿದ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳು ಮಗ್ಗುಲ ಗ್ರಾಮದ ಕಾಫಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಸುವಿನ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳನ್ನು ಪತ್ತೆ ಹಚ್ಚಿದ ಅರಣ್ಯ ಅಧಿಕಾರಿ ರೋಷಿನಿ, ಹಸುವಿನ ಮೇಲೆ ಚಿರತೆ ದಾಳಿ ಮಾಡಿರಬಹುದು ಎಂದು ತಿಳಿಸಿದ್ದಾರೆ. ಈ ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗುವುದು, ಹಸುವನ್ನು ಕಳೆದುಕೊಂಡ ಮಾಲೀಕ ಹಮೀದ್‍ಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತವೆ ಎಂದು ತಿಳಿಸಿದರು. ಈ ಸಂದರ್ಭ ಉಪ ವಲಯ ಅರಣ್ಯ ಅಧಿಕಾರಿ ಸಚಿನ್, ಚಂದ್ರಶೇಖರ್ ಮತ್ತು ಸಿಬ್ಬಂದಿ ಹಾಜರಿದ್ದರು.