ಹುಣಸೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಆರಂಭ

ಹುಣಸೂರು, ಮೇ 5(ಕೆಕೆ)-ಹುಣಸೂರಿನಲ್ಲಿ ದಿನೇದಿನೆ ಹೆಚ್ಚುತ್ತಿರುವ ಕೋವಿಡ್ ಸೋಂಕಿನಿಂದ ಬಳಲುತ್ತಿರು ವವರ ಚಿಕಿತ್ಸೆಗಾಗಿ ತಾಲೂಕಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.

ತಾಲೂಕಿನ ಉಮ್ಮತ್ತೂರು ಗ್ರಾಮದ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಬಾಚಳ್ಳಿ ರಸ್ತೆಯಲ್ಲಿರುವ ಆದರ್ಶ ವಿದ್ಯಾ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಉಮ್ಮತ್ತೂರು(ನೆಲ್ಲೂರುಪಾಲ) ವಸತಿ ಶಾಲೆಯಲ್ಲಿ 75 ಹಾಸಿಗೆ ಹಾಗೂ ಬಿಳಿಕೆರೆ ಸಮೀಪದ ಸಬ್ಬನಹಳ್ಳಿ ವಸತಿ ಶಾಲೆಯಲ್ಲಿ 100 ಹಾಸಿಗೆಗಳ ಮತ್ತೆರಡು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

313 ಹಾಸಿಗೆಗಳ ವ್ಯವಸ್ಥೆ: ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 38, ಬಾಚಳ್ಳಿ ರಸ್ತೆಯ ಆದರ್ಶ ಶಾಲೆಯಲ್ಲಿ 100, ಉಮ್ಮತ್ತೂರು ವಸತಿ ಶಾಲೆಯಲ್ಲಿ 75 ಹಾಗೂ ಬಿಳಿಕೆರೆ ಸಮೀಪದ ಸಬ್ಬನಹಳ್ಳಿ ವಸತಿ ಶಾಲೆಯಲ್ಲಿ 100 ಹಾಸಿಗೆಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 313 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವ ಜನಿಕ ಆಸ್ಪತ್ರೆ, ಬಾಚಳ್ಳಿ ರಸ್ತೆಯ ಆದರ್ಶ ಶಾಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉಮ್ಮತ್ತೂರು ವಸತಿ ಶಾಲೆಯಲ್ಲಿ ಮಂಗಳ ವಾರದಿಂದ ಕಾರ್ಯಾರಂಭ ಮಾಡಲಾಗಿದೆ. ಬಿಳಿಕೆರೆಯ ಸಬ್ಬನಹಳ್ಳಿ ವಸತಿ ಶಾಲೆಯಲ್ಲಿ 100 ಹಾಸಿಗೆಗಳ ವಾರ್ಡ್‍ಗಳು ಸಿದ್ಧವಾಗಿದೆ ಎಂದು ತಿಳಿಸಿದರು.

ಸಚಿವರಿಂದ ಭರವಸೆ: ಸೋಂಕಿತರ ಚಿಕಿತ್ಸೆಗೆ ಅವಶ್ಯಕವಾಗಿ ಆಕ್ಸಿಜನ್ ಸಿಲಿಂಡರ್ ಬೇಕಾಗಿದ್ದು, ತಾಲೂಕಿಗೆ 100 ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಜೊತೆಗೆ 25 ಕಾನ್ಸನ್‍ಟ್ರೇಟರ್‍ಗಳನ್ನು ಕಲ್ಪಿಸಿ ಕೊಡÀಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಆಕ್ಸಿಜನ್ ಬೇಡಿಕೆ ತುಂಬ ಇದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆಗಳು ಕಂಡು ಬರುತ್ತಿದೆ. ಸಕಾಲದಲ್ಲಿ ಆಕ್ಸಿಜನ್ ಪೂರೈಕೆಗಾಗಿ ಕ್ರಮ ಕೈಗೊಳ್ಳುವÀಂತೆ ತಾವು ಸಚಿವರಲ್ಲಿ ಮಾಡಿದ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಕ್ಷಣಕ್ಕೆ ಹೆಚ್ಚುವರಿ ಸಿಲಿಂಡರ್ ಹಾಗೂ 25 ಕಾನ್ಸನ್‍ಟ್ರೇಟರ್‍ಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಸಿಬ್ಬಂದಿ ಕೊರತೆ: ತಾಲೂಕಿನಲ್ಲಿ ವೈದ್ಯರು, ಇತರೆ ಆರೋಗ್ಯ ಸಿಬ್ಬಂದಿಗಳ ಕೊರತೆ ಇದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿ ದ್ದರಿಂದ ಆರೋಗ್ಯ ಶಿಕ್ಷಣಾಧಿಕಾರಿ ಮಹ ದೇವ್ ಅವರನ್ನು ಮತ್ತೆ ಹುಣಸೂರಿನಲ್ಲೇ ಕರ್ತವ್ಯದಲ್ಲಿ ಮುಂದುವರೆಸಲು ಆದೇಶಿಸಿದ್ದಾರೆ. ಅಲ್ಲದೆ ಹುಣಸೂರಿ ನಿಂದ ವರ್ಗಾವಣೆಗೊಂಡಿರುವ ಆರೋಗ್ಯ ಸಹಾಯಕರನ್ನು ಮತ್ತೆ ನಿಯೋಜಿಸಿ ಕೊಡುವಂತೆ ಸಚಿವರಲ್ಲಿ ಕೋರಲಾಗಿದೆ. ಈ ಮನವಿಗೂ ಸಚಿವರು ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕೊರೊನಾ ಬಗ್ಗೆ ಸೋಂಕಿತರು ಭಯ ಬೀಳದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಅವರ ಸಲಹೆಗಳನ್ನು ಚಾಚುತಪ್ಪದೆ ಪಾಲಿಸಬೇಕು. ಮದುವೆ ಮತ್ತಿತರೆ ಸಾಮೂಹಿಕ ಕಾರ್ಯ ಕ್ರಮಗಳಿಗೆ ತೆರಳದೆ ಸ್ವಯಂ ನಿಯಂತ್ರಣ ದಲ್ಲಿರಬೇಕು. ಅನಗತ್ಯ ಸುತ್ತಾಟ ಬಿಟ್ಟು, ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಜನತೆಯಲ್ಲಿ ಶಾಸಕರು ಮನವಿ ಮಾಡಿದರು.

ತಹಸೀಲ್ದಾರ್ ಬಸವರಾಜು, ತಾಲೂಕಿ ನಲ್ಲಿ ಕೈಗೊಂಡಿರುವ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದರು. ಈ ಸಂದ ರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾ ಧಿಕಾರಿ ಬಸವರಾಜ್, ಕಂದಾಯ ಅಧಿಕಾರಿ ಶಿವಕುಮಾರ್, ಪಿಡಿಓ ಕೆಂಚೇಗೌಡ, ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.