ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್‍ಟಿ ಮೀಸಲಾತಿ ನಿಗದಿಪಡಿಸಿ ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ ಆಗ್ರಹ

ಮೈಸೂರು, ಜ.4(ಪಿಎಂ)- ಮೈಸೂರು ಮಹಾನಗರ ಪಾಲಿಕೆಯ ಮುಂದಿನ ಮೇಯರ್ ಸ್ಥಾನದ ಮೀಸಲಾತಿಯನ್ನು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ನಿಗದಿಪಡಿಸಬೇಕೆಂದು ಮೈಸೂರು ನಾಯಕರ ಪಡೆ ಅಧ್ಯಕ್ಷ, ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ ಆಗ್ರಹಿಸಿದ್ದಾರೆ.

ಮೈಸೂರು ನಗರದಲ್ಲಿ ನಾಯಕ ಜನಾಂಗ ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮೈಸೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಮೂರೂವರೆ ದಶಕಗಳು ಕಳೆದರೂ ನಾಯಕ ಜನಾಂಗಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಕಳೆದೊಂದು ದಶಕದಿಂದಲೂ ನಮ್ಮ ಸಮುದಾಯ ಸರ್ಕಾರಕ್ಕೆ ಈ ಬೇಡಿಕೆ ಮುಂದಿಟ್ಟರೂ ಪ್ರಯೋಜನವಾಗಿಲ್ಲ. ಇದು ರಾಜಕೀಯ ಪಕ್ಷಗಳು ನಮ್ಮ ಸಮುದಾಯದ ಮೇಲೆ ಇರಿಸಿರುವ ತಾತ್ಸಾರವೇ ಎಂಬ ಬೇಸರ ನಮ್ಮನ್ನು ಕಾಡುತ್ತಿದೆ.

ಎಲ್ಲಾ ಸಮುದಾಯದವರು ಮೇಯರ್ ಆಗಿದ್ದು, ಇಲ್ಲಿನ ಮೂಲನಿವಾಸಿಗಳಾದ ನಮ್ಮ ಸಮುದಾಯಕ್ಕೆ ಮೇಯರ್ ಸ್ಥಾನ ದಕ್ಕದಿರುವುದು ನೋವಿನ ಸಂಗತಿ. ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಜನಾಂಗ ಬಹುದೊಡ್ಡ ಪ್ರಮಾಣದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ಬರಲು ಮಹತ್ವದ ಪಾತ್ರ ವಹಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ ಹಾಗೂ ಬಿಜೆಪಿ ಪಕ್ಷದವರಿಗೂ ತಿಳಿದಿರುವ ವಿಷಯವಿದು. ಮುಂದಿನ ಅವಧಿಯ ಮೇಯರ್ ಮೀಸಲಾತಿ ಎಸ್‍ಟಿಗೆ ನಿಗದಿಪಡಿಸಿ ನಾಯಕ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.