ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಸೂಚನೆ

ತಿ.ನರಸೀಪುರ, ಏ.27(ಎಸ್‍ಕೆ)- ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ರಸಗೊಬ್ಬರ ಅಧಿಕೃತ ಮಾರಾಟಗಾರರು ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಒದಗಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮಯ್ಯ ಸೂಚಿಸಿದರು.
ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರಗಳ ಮಾರಾಟಗಾರರಿಗೆ ಕಾನೂನು ಕಾಯ್ದೆಗಳು ಹಾಗೂ ರಸಗೊಬ್ಬರಗಳ ನಿರ್ವಹಣೆ ಬಗ್ಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ತಾಲೂಕಿನ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ನಾಲೆ, ಬೋರ್‍ವೆಲ್ ನೀರಿನ ಮೂಲಕ ಬಿತ್ತನೆ ಮಾಡಿದ್ದಾರೆ. ಆದರೆ ಬೇಸಿಗೆ ಬೆಳೆಗೆ ಇಲಾಖೆಯಿಂದ ಯಾವುದೇ ಸಬ್ಸಿಡಿ ನೀಡುತ್ತಿಲ್ಲ. ಬೇಸಿಗೆ ಬೆಳೆಗೆ ನಾಲೆಗಳಿಗೆ ನೀರು ಬಿಡದ ಹಿನ್ನೆಲೆಯಲ್ಲಿ ನಾಟಿ ಮಾಡಿದರೆ ಅನಾಹುತವಾಗುವುದು ಬೇಡವೆಂದು ಸಬ್ಸಿಡಿ ನೀಡಿಲ್ಲ. ಮುಂದಿನ ದಿನಗಳಲ್ಲಿ ನಾಟಿ ಮಾಡಿರುವ ಬೆಳೆಗಳಿಗೆ ಕೀಟ, ರೋಗ ಕಂಡು ಬರುವುದರಿಂದ ಇಲಾಖೆಯಿಂದ ಕೀಟನಾಶಕ ಸರಬರಾಜು ಮಾಡಲಾಗುತ್ತಿದೆ. ಮುಂದೆ ಯೂರಿಯಾ ಮತ್ತು ಮೇಲು ಗೊಬ್ಬರದ ಅವಶ್ಯಕತೆ ಇರುತ್ತದೆ. ಅದು ಸಹ ಸಾಕಷ್ಟು ದಾಸ್ತಾನಿರುವುದರಿಂದ ರೈತರು ಆತಂಕ ಪಡುವುದು ಬೇಡ ಎಂದರು.

ಹಳೇ ದರದಲ್ಲೇ ಮಾರಾಟ ಮಾಡಿ: ಈಗಾಗಲೇ ಕೆಲ ರೈತ ನಾಯಕರು ರಸ ಗೊಬ್ಬರ ಅಂಗಡಿಗಳಲ್ಲಿ ಹೊಸ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ರಸಗೊಬ್ಬರ ಬೆಲೆಯನ್ನು ಸರ್ಕಾರ ಜಾಸ್ತಿ ಮಾಡಿದ್ದರೂ, ಇನ್ನೂಹೊಸ ದರ ಪ್ರಕಟಿಸಿಲ್ಲ. ಹೀಗಾಗಿ ರಸಗೊಬ್ಬರ ಅಧಿಕೃತ ಮಾರಾಟಗಾರರು ಹಳೇ ದಾಸ್ತಾನು ಮುಗಿಯುವವರೆಗೆ ಅದಕ್ಕೆ ಹೊಸ ದರ ಪಡೆಯದೇ ಹಳೆ ದರದಲ್ಲೇ ಮಾರಾಟ ಮಾಡಬೇಕು. ಹೆಚ್ಚಿನ ದರ ಪಡೆಯುವ ಬಗ್ಗೆ ದೂರು ಕೇಳಿ ಬಂದರೆ ಕಠಿಣ ಕ್ರಮ ಜರುಗಿಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ಅತಿಥಿ ಉಪನ್ಯಾಸಕ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕೃಷಿಗೆ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ರೈತರಿಗೆ ನೀಡಬೇಕು ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಕೃಷಿ ಅಧಿಕಾರಿಗಳಾದ ರಾಘವೇಂದ್ರ, ವಿಶಾಲಾಕ್ಷಿ, ಕಾವ್ಯ, ಜಯಲಕ್ಷ್ಮಿ, ಮೂಗೂರು ಪಿಎಸಿಸಿ ಸಿಇಓ ನಂದೀಶ್, ತಾಲೂಕು ರಸಗೊಬ್ಬರ ಮಾರಾಟಗಾರರಾದ ಕೇಶವ.ಎನ್, ವಿಜಯ್, ಸಿ.ಪಿ.ಕೃಷ್ಣ, ಪ್ರಕಾಶ್, ಪಿ.ಮಲ್ಲೇಶ್, ಕುಮಾರ್, ರಾಜೇಶ್, ಕೃಷ್ಣೇಗೌಡ, ಶಿವಣ್ಣ, ಬಸವರಾಜು, ಮಹೇಶ್ ಕುಮಾರ್, ನಟರಾಜು, ಕುಮಾರ್, ರಮೇಶ್, ರಘುನಂದನ್, ಹೇಮಂತ್ ರಾಜ್ ಮತ್ತಿತರರಿದ್ದರು.