ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಆರಂಭ

ರಾಷ್ಟ್ರೀಯ ವಿಜ್ಞಾನ ಹಬ್ಬದ ಸಮನ್ವಯಾಧಿಕಾರಿ ಎಎಸ್‍ಕೆವಿಎಸ್ ಶರ್ಮ ಅವರು ಮಂಗಳವಾರ ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತುಪ್ರದರ್ಶನದ ಮಾಹಿತಿ ನೀಡುತ್ತಿರುವುದು.

ಮೈಸೂರು, ಫೆ. 22 (ಆರ್‍ಕೆ)- ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಇಂದಿನಿಂದ ರಾಷ್ಟ್ರೀಯ ವಿಜ್ಞಾನ ಹಬ್ಬ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಆರಂಭವಾಯಿತು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಎಫ್‍ಟಿಆರ್‍ಐ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಯುಕ್ತಾ ಶ್ರಯದಲ್ಲಿ ‘ಸರ್ವಮಾನ್ಯವಿದು ವಿಜ್ಞಾನ’ ಘೋಷಣೆಯೊಂದಿಗೆ ಆರಂಭವಾಗಿರುವ ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಲು ಮೈಸೂರು, ಸುತ್ತಮುತ್ತಲಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಫೆ.28ರವರೆಗೆ ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ಹಬ್ಬ ದೇಶದ 75 ಕಡೆಗಳಲ್ಲಿ ನಡೆಯಲಿದ್ದು, ಕರ್ನಾಟಕದ ಮೈಸೂರು, ಬೆಂಗಳೂರು, ಮಂಗಳೂರು ಹಾಗೂ ಗುಲ್ಬರ್ಗಾದಲ್ಲಿ ಏರ್ಪಡಿಸಲಾಗಿದೆ.

ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಆರಂ ಭವಾಗಿರುವ ವಿಜ್ಞಾನ ವಸ್ತುಪ್ರದರ್ಶನದಲ್ಲಿ 40 ಸ್ಟಾಲ್‍ಗಳನ್ನು ತೆರೆಯಲಾಗಿದ್ದು, ವಿಜ್ಞಾನ, ತಂತ್ರಜ್ಞಾನ- ಸಂಶೋಧನೆ, ಪುಸ್ತಕ ಪ್ರದರ್ಶನ, ಡಿಎಫ್‍ಆರ್‍ಎಲ್ ಸಂಸ್ಥೆಯ ಆಹಾರ ತಯಾರಿಕಾ ಸಂಶೋ ಧನೆ ಕುರಿತು ಮಾಹಿತಿ ಬಿತ್ತರಿಸಲಾಗಿದೆ.

ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಶಾಲಾ ಮಕ್ಕಳಿಗೆ ವಸ್ತು ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಫೆ.24ರಿಂದ, ಮಳವಳ್ಳಿ, ಯಳಂದೂರು ಹಾಗೂ ಸರಗೂರುಗಳಲ್ಲೂ ವಿಜ್ಞಾನ ಹಬ್ಬದ ಅಂಗ ವಾಗಿ ರಸಪ್ರಶ್ನೆ ಸ್ಪರ್ಧೆ, ನಾಟಕ ಪ್ರದರ್ಶನ ಹಾಗೂ ಇಸ್ರೋದಿಂದ ಮೊಬೈಲ್ ಸೈನ್ಸ್ ಎಕ್ಸಿಬಿಷನ್ ಏರ್ಪಡಿಸಲಾಗಿದೆ.

ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಲು ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸಂಯೋಜನಾಧಿಕಾರಿ ಎಎಸ್‍ಕೆವಿಎಸ್ ಶರ್ಮಾ ಅವರು ಸಿಎಫ್‍ಟಿಆರ್‍ಐನಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಸಂಶೋಧನೆ ತಂತ್ರಜ್ಞಾನ ಕುರಿತು ಮಾಹಿತಿ ನೀಡುತ್ತಿದ್ದಾರೆ.