ವೃದ್ಧೆ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ನಗದು ಅಪಹರಣ

ಸುಂಟಿಕೊಪ್ಪ, ಏ.28- ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಕಾಫಿ ಬೆಳೆಗಾರ ವೃದ್ದೆಯೊಬ್ಬರ ಮನೆಗೆ ನುಗಿದ ಮೂವರು ಖದೀಮರು ವೃದ್ಧೆಯ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಘಟನೆ ಹಿನ್ನೆಲೆ: ಸುಂಟಿಕೊಪ್ಪ ಸಮೀಪದ ಹಾರ್‍ಬೈಲ್ ಗ್ರಾಮದ ದಿವಂಗತ ಕುಂಞಣ್ಣ ರೈ ಅವರ ಪತ್ನಿ ಸರೋಜಿನಿ ಅವರು ತನ್ನ 4 ಎಕರೆ ಕಾಫಿ ತೋಟ ನೋಡಿಕೊಂಡು ಏಕಾಂಗಿಯಾಗಿ ಜೀವನ ನಡಸುತ್ತಿದ್ದರು. ಇವರ ಮಗ ಗುತ್ತಿಗೆದಾರ ಪುರು ಷೋತ್ತಮ ರೈ ಕುಶಾಲನಗರದಲ್ಲಿ ವಾಸವಾಗಿದ್ದು ಆಗಿಂದಾಗ್ಗೆ ತಾಯಿಯ ಮನೆಗೆ ಬಂದು ಹೋಗುತ್ತಿ ದ್ದರು. ಸರೋಜಿನಿ ಅವರ ಹಿರಿಯ ಮಗ ನಿಧನ ಹೊಂದಿದ್ದು, ಅವರ ಮಗ ಕಾಲೇಜು ವಿದ್ಯಾರ್ಥಿಯಾಗಿದ್ದು ವ್ಯಾಸಂಗ ಕ್ಕಾಗಿ ಚಿಕ್ಕಪ್ಪನ ಮನೆಯಲ್ಲಿ ಉಳಿದು ಕೊಂಡಿದ್ದಾನೆ. ಆತ ಕೆಲವೊಮ್ಮೆ ಸುಂಟಿಕೊಪ್ಪದ ಅಜ್ಜಿ ಮನೆಯಲ್ಲಿ ಉಳಿದು ಹೋಗುತ್ತಿದ್ದ ಎನ್ನಲಾಗಿದೆ.

ಏ.27ರಂದು ಸಂಜೆ 7.30ರ ಸುಮಾರಿನಲ್ಲಿ ಸರೋಜಿನಿ ಅವರು ಮನೆಯ ಹಿಂಭಾಗದಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆದುಕೊಂಡು ಮನೆ ಒಳಗೆ ಪ್ರವೇಶಿಸುವಾಗ ಮೂವರು ಖದೀಮರು ಸರೋಜಿನಿ ಅವರನ್ನು ಹಿಡಿದು ಮನೆಯೊಳಗೆ ಎಳೆದೊಯ್ದಿದ್ದಾರೆ. ಬಳಿಕ ಒಬ್ಬಾತ ಅವರ ಸೀರೆಯ ಸೆರಗನ್ನು ಬಾಯಿಗೆ ತುರುಕಿದ್ದು, ಮತ್ತೊಬ್ಬ ಅವರ 2 ಕೈಗಳನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದಾರೆ. ಮತ್ತೊಬ್ಬ ಕಳ್ಳ ವೃದ್ಧೆಯ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಗಾಡ್ರೇಜ್‍ನ ಬೀಗ ಮುರಿದು 32 ಗ್ರಾಂ.ಚಿನ್ನದ ಸರ, 12 ಗ್ರಾಂ.ಚಿನ್ನದ 4 ಬಳೆ, 2 ಗ್ರಾಂ.ನ 1 ಉಂಗುರ ಹಾಗೂ ಬೀರುವಿನಲ್ಲಿದ್ದ 35 ಸಾವಿರ ರೂ. ನಗದು ಸೇರಿದಂತೆ ಒಟ್ಟು 3.90 ಲಕ್ಷ ರೂ. ಮೊತ್ತದ ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾಗಿದ್ದಾರೆ. ಮನೆಗೆ ನುಗಿದ್ದ 3 ಮಂದಿ ಮುಖಗವಸು ಧರಿಸಿದ್ದು, ಅಪರಿಚಿತರಾಗಿದ್ದಾರೆ ಎಂದು ಸರೋಜಿನಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಪುರುಷೋತ್ತಮ ರೈ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ಡಿವೈಎಸ್‍ಪಿ ಶೈಲೇಂದ್ರ, ವೃತ್ತನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್, ವೆಂಟರ ಮಣ ಹಾಗೂ ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಕಳ್ಳರಿಗಾಗಿ ಶೋಧ ನಡೆಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.