ಕರ್ನಾಟಕ ಪ್ರಜಾ ಪಾರ್ಟಿಯಿಂದ ನಿರುದ್ಯೋಗ ಹಠಾವೋ, ವಿದ್ಯಾವಂತ ಯುವಕರ ಬಚಾವೋ ಕಾರ್ಯಕ್ರಮ

ಮೈಸೂರು, ಸೆ.19- ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ‘ನಿರುದ್ಯೋಗ ಹಠಾವೋ, ವಿದ್ಯಾ ವಂತ ಯುವಕರ ಬಚಾವೋ’ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಶಿವಣ್ಣ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಕಳೆದ 50 ವರ್ಷಗಳಲ್ಲಿ ಯಾರೂ ಕಂಡು ಕೇಳರಿಯದಂತಹ ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ. ವಿದ್ಯಾವಂತ ಯುವಕರು ತಮ್ಮ ಸ್ನಾತಕೋತ್ತರ ಮತ್ತು ಪದವಿ ಸರ್ಟಿಫಿಕೇಟ್‍ಗಳನ್ನು ಹಿಡಿದು ಉದ್ಯೋಗಕ್ಕಾಗಿ ರಸ್ತೆಯಲ್ಲಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ದೇಶದ ಪ್ರಧಾನಿ ಮೋದಿಯವರು ಸುಖಾಸುಮ್ಮನೆ ವಿದೇಶ ಸುತ್ತಿಕೊಂಡು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಾ, ಉದ್ಯೋಗ ಕೇಳುವ ಯುವಕರಿಗೆ ಪಕೋಡ ಮಾರುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇಶದ ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಅವರಿಗೆ ವಿದ್ಯಾರ್ಹತೆಗೆ ತಕ್ಕಂತಹ ಉದ್ಯೋಗ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಪಣ ತೊಡ ಬೇಕಾಗಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಶಕ್ತಿ ಯುವ ಸಮೂಹಕ್ಕೆ ಇದೆ ಎಂಬುದನ್ನು ಪ್ರಧಾನಿಗಳು ಮನಗಾಣಬೇಕಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು ಮನಸ್ಸು ಮಾಡಿದರೆ ಮೋದಿಯವರನ್ನು ಮನೆಗೆ ಕಳುಹಿಸುತ್ತಾರೆ ಎಂಬ ವಿವೇಚನೆ ಪ್ರಧಾನಮಂತ್ರಿಗಳಿಗೆ ಇರಬೇಕಾಗುತ್ತದೆ.

ನಿರುದ್ಯೋಗ ಸಮಸ್ಯೆ ಹೀಗೇ ಮುಂದುವರೆದರೆ ಮುಂದೊಂದು ದಿನ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ದೇಶದಲ್ಲಿ ಕ್ರಾಂತಿ ಮಾಡುವಂತಹ ಸನ್ನಿವೇಶ ಸೃಷ್ಟಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿಯು ನಿರುದ್ಯೋಗ ಹಠಾವೋ, ವಿದ್ಯಾವಂತ ಯುವಕರ ಬಚಾವೋ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತದೆ ಎಂದು ಶಿವಣ್ಣ ತಿಳಿಸಿದ್ದಾರೆ.