ದುರ್ವಾಸನೆ ಬೀರುತ್ತಿರುವ ಬಂಡಿಪಾಳ್ಯ ಎಪಿಎಂಸಿ ಆವರಣ

ಮೈಸೂರು: ಕೊಳೆತು ದುರ್ವಾಸನೆ ಬೀರುತ್ತಿರುವ ತ್ಯಾಜ್ಯ, ಉಪಯೋಗಕ್ಕೆ ಬಾರದ ಶೌಚಾಲಯ, ರಾಡಿಯಿಂದ ಕೂಡಿದ ರಸ್ತೆಗಳು, ಜತೆಗೆ ಜುಯ್ ಎಂದು ಮುತ್ತಿಕೊಳ್ಳುವ ನೊಣಗಳು ಹೀಗೆ ಹತ್ತು ಹಲವು ಸಮಸ್ಯೆಗಳ ಆಗರ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆ.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ ಬೃಹತ್ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಮೈಸೂರು ಸುತ್ತಮುತ್ತ ಮಾತ್ರವಲ್ಲದೆ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಂದ ಪ್ರತಿ ನಿತ್ಯ ತರಕಾರಿ, ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ತಂದು ಮಾರಾಟ ಮಾಡಲಾಗುತ್ತದೆ. ಜತೆಗೆ ನೂರಾರು ಮಂದಿ ಸಾರ್ವಜನಿಕರು ಪದಾರ್ಥಗಳನ್ನು ಖರೀದಿಸಲು ಆಗಮಿಸುತ್ತಾರೆ. ಆದರೆ, ಶುಚಿತ್ವದ ಕೊರತೆಯಿಂದಾಗಿ ಅನಾರೋಗ್ಯಕ್ಕೀಡಾಗಲು ಬೇಕಾದ ಎಲ್ಲಾ ಲಕ್ಷಣಗಳು ಕಂಡು ಬರುತ್ತವೆ.

ತ್ಯಾಜ್ಯದಿಂದ ತುಂಬಿದ ಚರಂಡಿ: ಮಳೆಯ ನೀರು ಸರಾಗವಾಗಿ ಹರಿಯಲು ನಿರ್ಮಿಸಿರುವ ಚರಂಡಿಯು ಅನುಪಯುಕ್ತ ತರಕಾರಿಗಳಿಂದ ತುಂಬಿದ್ದು, ಮಳೆಯ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿಯುತ್ತಿದೆ.
ಉಸಿರುಗಟ್ಟಿಸುವ ದುರ್ವಾಸನೆ: ಎಪಿಎಂಸಿ ಮಾರುಕಟ್ಟೆಗೆ ಪ್ರತಿ ದಿನ ಹೊರ ಜಿಲ್ಲೆ, ರಾಜ್ಯಗಳಿಂದ ತರಕಾರಿಗಳನ್ನು ಲಾರಿಗಳಲ್ಲಿ ತರಲಾಗುತ್ತದೆ. ಈ ವೇಳೆ ತರಕಾರಿಗಳು ಕೊಳೆತು ಹೋಗಿರುತ್ತವೆ. ಈ ವೇಳೆ ಉತ್ತಮವಾಗಿರುವ ಮತ್ತು ಕೊಳೆತ ತರಕಾರಿಗಳನ್ನು ಬೇರ್ಪಡಿಸಿ, ಕೊಳೆತ ತರಕಾರಿಗಳನ್ನು ರಸ್ತೆ ಬದಿಯಲ್ಲೆ ಸುರಿಯಲಾಗುತ್ತಿದೆ. ಇದು ರಾಶಿ, ರಾಶಿಯಷ್ಟು ಬಿದ್ದಿದ್ದು, ಮಳೆಯಿಂದಾಗಿ ತರಕಾರಿಯೆಲ್ಲಾ ಕೊಳೆತು ದುರ್ವಾಸನೆ ಬೀರುತ್ತಿದೆ. ಜತೆಗೆ ನೊಣಗಳ ಹಾವಳಿಯೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಉಪಯೋಗಕ್ಕೆ ಬಾರದ ಶೌಚಾಲಯ: ಬೃಹತ್ ಮಾರುಕಟ್ಟೆಯೊಳಗೆ ಒಂದು ಶೌಚಾಲಯ ನಿರ್ಮಾಣ ಮಾಡಲಾಗಿದೆಯಾದರೂ ಸಾರ್ವಜನಿಕರು ಶೌಚಾಲಯಕ್ಕೆ ಹೋಗುವುದಿಲ್ಲ. ಬದಲಾಗಿ ಶೌಚಾಲಯದ ಪಕ್ಕದಲ್ಲಿಯೇ ಮೂತ್ರವಿಸರ್ಜನೆ ಮಾಡುವುದರಿಂದ ಗಬ್ಬೆದ್ದು ನಾರುತ್ತಿದೆ.

ರಸ್ತೆಯಲ್ಲೇ ತರಕಾರಿ ವಿಂಗಡಣೆ: ಕೆಲವು ಮಾಲೀಕರು ತಾವು ತರಿಸಿದ ತರಕಾರಿಯನ್ನು ತಮ್ಮ ಮಳಿಗೆಯ ಎದುರಿನ ರಸ್ತೆಯಲ್ಲಿಯೇ ಹಾಕಿಸಿ ಕೊಳೆತ ತರಕಾರಿಗಳನ್ನು ಬೇರ್ಪಡಿಸುತ್ತಾರೆ. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿದೆ.

View Comments (2)

  • ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.ಅಲ್ಲಿರುವ ಸಮಸ್ಯೆಗಳು ಪರಿಸರ ಮೇಲೆ ಬಹಳ ತೊಂದರೆ ಮಾಡುತ್ತಿದೆ. ವರ್ತತಕರು ರೈತರಿಗೂ ಮೋಸ ಮಾಡುತ್ತಿದ್ದಾರೆ.

  • Recently government announced a scheme under the name GOBAR-DHAN. Corporation or any NGO can initiate under this program for introducing Biogas plant to clear all the garbage in APMC and surrounding areas