ಮೈಸೂರು: ಯಾರು ಪರಮ ತೃಪ್ತಿ ಹೊಂದಿರು ತ್ತಾರೋ ಅವರು ಶರಣರು. ಅಂತಹ ಪರಮ ತೃಪ್ತ ಶರಣರನ್ನು ಯಾರಿಂ ದಲೂ, ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಲಿಂಗಾಯತ ಸಂಘ-ಸಂಸ್ಥೆಗಳ ಒಕ್ಕೂಟ, ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಬಾಹ್ಯ ಸಂಪತ್ತಿನಿಂದ ಇವರು ಶ್ರೀಮಂತರು, ಬಡ ವರು ಎಂದು ಅಳೆಯಬಹುದು. ಆದರೆ ಶರಣರನ್ನು ಅವರು ಹೆಚ್ಚು, ಇವರು ಕಡಿಮೆ ಎಂದು ಅಳೆಯಲು ಸಾಧ್ಯವಿಲ್ಲ. ಶರಣರು ಎನಿಸಿಕೊಳ್ಳಬೇಕಾದರೆ ಅವರ ಅಂತರಂಗದಲ್ಲಿ ನಾವು ಪ್ರವೇಶಿ ಸಬೇಕಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು ಶಿವಪಥ ಮತ್ತು ಮಹಾ ದಾಸೋಹ ತೋರಿಸಿದ್ದಾರೆ. ನಾವೆಲ್ಲರೂ ದಾಸೋಹಿಗಳು. ದಾಸೋಹಿ ಎಂದರೆ ಭಗವಂತ ಕೊಟ್ಟಿದ್ದನ್ನು ಅನುಭವಿಸಿ, ಬದುಕನ್ನು ಸುಂದರಗೊಳಿಸಿಕೊಳ್ಳುವುದು ಎಂದರ್ಥ. ಯಾವುದೂ ನನ್ನದಲ್ಲ, ನಾನು ದೇವರ ಅತಿಥಿ, ಇದು ದೇವನ ಜಗತ್ತು. ಈ ಅದ್ಭುತ ಜಗತ್ತಿನಲ್ಲಿ ನಾನೊಬ್ಬ ಆತನ ಅತಿಥಿ ಎಂದು ತಿಳಿಸಿದರು.
ಬಸವಣ್ಣನವರ ವಚನದ ಸಾಲುಗಳು ನಮ್ಮೊಳಗೆ ಮೂಡಿದರೆ ಸಾಕು ಅದುವೇ ನಿಜವಾದ ಬಸವ ಜಯಂತಿ ಆಚರಿಸಿ ದಂತೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಶೋಭಾ ಜಯ ಪ್ರಕಾಶ್ ಮತ್ತು ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.