ಬೆಳಗಾವಿ ಪಾಲಿಕೆ ಕನ್ನಡ ಧ್ವಜ ತೆರವಿಗೆ ಎಂಇಎಸ್ ಪುಂಡಾಟ ಖಂಡಿಸಿ ಪ್ರತಿಭಟನೆ

ಮೈಸೂರು,ಅ.26(ಪಿಎಂ)- ಬೆಳಗಾವಿ ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿರುವುದೂ ಸೇರಿದಂತೆ ಕನ್ನಡ ವಿರೋಧಿ ವರ್ತನೆ ತೋರುತ್ತಿರುವ ಎಂಇಎಸ್ ಸಂಘ ಟನೆ ಪುಂಡಾಟ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಎಂಇಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಬನ್ನೂರು ಕೆ.ರಾಜು, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯಿಂದ ಕನ್ನಡದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದರ ಹಿಂದೆ ಮಹಾರಾಷ್ಟ್ರ ಸರ್ಕಾರದ ಕುಮ್ಮ ಕ್ಕಿದೆ. ಭಾಷಾ ಸೌಹಾರ್ದಕ್ಕೆ ಹೆಸರಾಗಿರುವ ಕನ್ನಡಿಗರನ್ನು ಪದೆ ಪದೇ ಕೆಣಕಲಾಗುತ್ತಿದೆ ಎಂದು ಕಿಡಿಕಾರಿದರು.

ಇಂತಹ ಗೂಂಡಾ ವರ್ತನೆ ನಿನ್ನೆ ಮೊನ್ನೆಯಿಂದ ನಡೆಯುತ್ತಿಲ್ಲ. ಏಕೀಕರಣದ ನಂತರ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳು ಬೆಳಗಾವಿಯಲ್ಲಿ ಕನ್ನಡದ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಗಾಣಿಸುವಲ್ಲಿ ವಿಫಲವಾಗಿವೆ. ಈಗಲೂ ನಿರ್ಲಕ್ಷ್ಯ ತಾಳಿದರೆ ಬೆಳಗಾವಿ, ಮಹಾರಾಷ್ಟ್ರದ ಪಾಲಾಗಲಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಭಾಷಾ ಸೌಹಾರ್ದತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಎಂಇಎಸ್ ಪುಂಡಾಟ ಕೊನೆಗಾಣಿಸಬೇಕು ಎಂದು ಒತ್ತಾಯಿಸಿ ದರು. ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಬೀದಿ ರವಿ, ಕೆ.ಮಹೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು