ಶ್ರೀರಂಗಪಟ್ಟಣ ಬಳಿ ಬೆಂಗಳೂರು ರೌಡಿಶೀಟರ್ ಹತ್ಯೆ

ಮಂಡ್ಯ: ಬೆಂಗಳೂರಿನ ರೌಡಿಶೀಟರ್ ವೊಬ್ಬನನ್ನು ಅಲ್ಲಿನ ಮತ್ತೊಂದು ರೌಡಿ ಗ್ಯಾಂಗ್ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ಬಳಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದೆ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ, ಸುಲಿಗೆ ಹಾಗೂ ಡಕಾಯಿತಿ ಪ್ರಕರಣ ದಾಖಲಾಗಿದ್ದ ಕುಖ್ಯಾತ ರೌಡಿ ಅರಸಯ್ಯ ಎಂಬಾತನೇ ಹತ್ಯೆಗೊಳಗಾದವನಾಗಿದ್ದು, ಈತನ ವಿರೋಧಿ ಗ್ಯಾಂಗ್ ಇಂದು ಮಧ್ಯಾಹ್ನ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಅರಸಯ್ಯನನ್ನು ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಸಾವನ್ನಪ್ಪಿದ್ದಾನೆ.

ವಿವರ: ಶ್ರೀರಂಗಪಟ್ಟಣದ ಮಹಾಕಾಳಿ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷನಾಗಿರುವ ರೌಡಿಶೀಟರ್ ಅರಸಯ್ಯ, ಭೀಮನ ಅಮಾವಾಸ್ಯೆಯಾದ ಇಂದು ವಿಶೇಷ ಪೂಜೆ ಸಲ್ಲಿಸಲು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದ. ಪೂಜೆ ಮುಗಿಸಿಕೊಂಡು ಮಧ್ಯಾಹ್ನ ಬೆಂಗಳೂರಿಗೆ ಇನ್ನೋವಾ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಆತನ ಕಾರನ್ನು ಮೂರು ಕಾರುಗಳಲ್ಲಿ ಹಿಂಬಾಲಿಸಿದ ವಿರೋಧಿ ತಂಡ ಟಿ.ಎಂ.ಹೊಸೂರು ಗೇಟ್ ಬಳಿ ಅರಸಯ್ಯನ ಕಾರನ್ನು ಅಡ್ಡಗಟ್ಟಿದೆ. ಈ ವೇಳೆ ಆತನ ಸ್ನೇಹಿತರಾದ ಶ್ರೀನಿವಾಸ್ ಮತ್ತು ರಂಗಸ್ವಾಮಿ ಎಂಬುವರು ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ. ಸ್ವತಃ ಕಾರನ್ನು ಚಾಲನೆ ಮಾಡುತ್ತಿದ್ದ ಅರಸಯ್ಯ, ವಿರೋಧಿ ಗುಂಪಿಗೆ ಸಿಕ್ಕಿ ಹಾಕಿಕೊಂಡಿದ್ದು, ಆತನ ಮೇಲೆ ಲಾಂಗ್‍ಗಳಿಂದ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದೆ.

ತಲೆ ಮತ್ತು ಕತ್ತಿನ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅರಸಯ್ಯನನ್ನು ಸ್ನೇಹಿತರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಂಜೆ ಮೃತಪಟ್ಟಿದ್ದಾನೆ.
ಅರಸಯ್ಯನ ಸ್ನೇಹಿತ ಶ್ರೀನಿವಾಸ್ ಈ ಸಂಬಂಧ ನೀಡಿದ ದೂರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್ ರವೀಂದ್ರ ಅವರು ತನಿಖೆ ಮುಂದುವರೆಸಿದ್ದಾರೆ.