ಬೈಕ್ ಕಳ್ಳರ ಬಂಧನ: 11 ಬೈಕ್ ವಶ ಶ್ರೀರಂಗಪಟ್ಟಣ ಪೊಲೀಸರ ಯಶಸ್ವಿ

ಮಂಡ್ಯ: ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, 11ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಬನ್ನೂರಿನ ಅತೀಕ್ ಪಠಾಣ್ (23), ರಾಹೀಲ್ (19), ಹಾಗೂ ಇಸ್ಮಾಯಿಲ್ (22) ಬಂಧಿತರು. ಇವರಿಂದ ಸುಮಾರು 5 ಲಕ್ಷದ 50 ಸಾವಿರ ರೂ. ಮೌಲ್ಯದ 11 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರುಗಳು ಗುಜರಿ ಅಂಗಡಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದು, ಕಳ್ಳತನವನ್ನು ಸಲೀಸಾಗಿ ಮಾಡುತ್ತಿದ್ದರು ಎನ್ನಲಾಗಿದೆ. ಪಾಂಡವಪುರ ವ್ಯಾಪ್ತಿಯಲ್ಲಿ 4, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ 2, ಹುಣಸೂರು ವ್ಯಾಪ್ತಿಯಲ್ಲಿ 4, ಬನ್ನೂರು ಠಾಣೆ ವ್ಯಾಪ್ತಿಯಲ್ಲಿ 1 ಬೈಕ್‍ಗಳನ್ನು ಕಳ್ಳತನ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಕಳೆದ ಬುಧವಾರ(ಜೂ.13) ತಾಲೂಕಿನ ಗೌರಿಪುರ ಬಳಿ ಕಾಲುವೆ ಹತ್ತಿರ ಬೈಕ್ ಕಳ್ಳತನ ಮಾಡುವ ವೇಳೆ ಈ ತಂಡದ ಒಬ್ಬ ಸಿಕ್ಕಿಬಿದ್ದಿದ್ದು, ನಂತರ ಖದೀಮರ ಜಾಲವನ್ನು ಬೇಧಿಸಿ, ಮೂವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಪಾರ್ಕಿಂಗ್, ಜಮೀನುಗಳ ಬಳಿ ನಿಂತಿದ್ದ ಬೈಕ್ ಗಳನ್ನು ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಅವರೇ ಉಪಯೋಗಿಸಿಕೊಂಡು ಮತ್ತು ಅವರ ಸಂಬಂಧಿಕರಿಗೆ ನೀಡುತ್ತಿದ್ದು ಉಳಿದವುಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ಪಿ ಯೋಗೇಂದ್ರನಾಥ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐ ಬಿ.ಎನ್. ಪುನೀತ್, ಸಿಬ್ಬಂದಿಗಳಾದ ರವೀಂಶ, ಕೃಷ್ಣೇಗೌಡ, ಚಂದ್ರಶೇಖರ್, ಹರೀಶ, ಗೋವಿಂದ, ಕೃಷ್ಣ, ಚಾಲಕ ಮಂಜು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.