ಧ್ರುವನಾರಾಯಣ್ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಾಮರಾಜನಗರ, ಆ.23(ಎಸ್‍ಎಸ್)- ಆರ್‍ಎಸ್‍ಎಸ್‍ನವರು ಭಾರತದ ತಾಲಿ ಬಾನಿಗಳು ಎಂಬ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾ ಯಣ್ ಅವರ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಆರ್.ಧ್ರುವ ನಾರಾಯಣ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧ್ರುವನಾರಾಯಣ್ ಈ ಕೂಡಲೇ ಆರ್‍ಎಸ್‍ಎಸ್ ವಿರುದ್ಧ ನೀಡಿರುವ ಹೇಳಿಕೆ ಯನ್ನು ಹಿಂಪಡೆಯಬೇಕು ಹಾಗೂ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾಜಿ ಸಂಸದ ಆರ್.ಧ್ರುವನಾರಾಯಣ್ ಪ್ರಚಾರಕ್ಕಾಗಿ ಆರ್‍ಎಸ್‍ಎಸ್ ಸಂಘಟನೆ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ಹುರುಳಿಲ್ಲ. ಆರ್‍ಎಸ್‍ಎಸ್ ಸಂಘಟನೆ ದೇಶಪ್ರೇಮಿಗಳನ್ನು ಹುಟ್ಟು ಹಾಕುತ್ತದೆ. ದೇಶ ಕಟ್ಟುವವರನ್ನು ಬೆಳೆಸುತ್ತದೆ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಲೂಟಿಕೋರರ ಪರ ಕಾಂಗ್ರೆಸ್ ನಿಂತಿದೆ. ಆದರೆ, ಆರ್‍ಎಸ್‍ಎಸ್ ಎಂದೂ ದೇಶಕ್ಕಾಗಿ ದುಡಿಯುತ್ತದೆ. ಇದನ್ನು ಮರೆತು ಧ್ರುವನಾರಾಯಣ್ ಮತ್ತೆ ಆರ್‍ಎಸ್‍ಎಸ್ ವಿರುದ್ಧ ಮಾತನಾಡಿದರೆ, ಇವರು ನಗರಕ್ಕೆ ಬಂದಾಗಲೆಲ್ಲ ಕಪ್ಪು ಬಾವುಟ ಪ್ರದರ್ಶಿಸಿ, ಮುತ್ತಿಗೆ ಹಾಕ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರಣಯ್, ಜಿಪಂ ಮಾಜಿ ಅಧ್ಯಕ್ಷೆ ಜಿ.ನಾಗಶ್ರೀ ಪ್ರತಾಪ್, ಹಾಸನ ಜಿಲ್ಲಾ ಪ್ರಭಾರಿ ಜಿ.ನಿಜಗುಣರಾಜು, ಚಾಮುಲ್ ನಿರ್ದೇಶಕರಾದ ರವಿಶಂಕರ್, ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಪಿ.ಎನ್.ದಯಾನಿಧಿ, ಮುಖಂಡರಾದ ನೂರೊಂದುಶೆಟ್ಟಿ, ಕೆ.ವೀರ ಭದ್ರಸ್ವಾಮಿ, ಬಾಲಸುಬ್ರಹ್ಮಣ್ಯಂ, ಬೇಡರ ಪುರ ಬಸವಣ್ಣ, ಧೀರಜ್‍ಪ್ರಸಾದ್, ಜಯ ಶಂಕರ್, ರಾಜು, ನಂದೀಶ್, ಮಂಜುನಾಥ್, ರಾಘವೇಂದ್ರ, ಮಹದೇವಸ್ವಾಮಿ, ಪರಶಿವ ಮೂರ್ತಿ, ಸುಂದರ್‍ರಾಜ್, ಕಿರಣ್, ಚಂದ್ರ ಶೇಖರ್, ವನಜಾಕ್ಷಿ, ಪದ್ಮಾ, ಮಂಜುಳಾ, ದಾಕ್ಷಾಯಿಣಿ ಇತರರು ಪಾಲ್ಗೊಂಡಿದ್ದರು.