ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌ ಅಭಿವೃದ್ಧಿ

  • ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ಭರವಸೆ
  • ಮಂಡ್ಯಕ್ಕೆ 50 ಕೋಟಿ ವಿಶೇಷ ಪ್ಯಾಕೇಜ್
  • ಗಗನಚುಕ್ಕಿ ಭರಚುಕ್ಕಿಯಲ್ಲಿ ಮೂಲ ಸೌಕರ್ಯಕ್ಕೆ 5 ಕೋಟಿ
  • ಮೈಸೂರಲ್ಲಿ ರೇಷ್ಮೆಗೂಡು ಮಾರುಕಟ್ಟೆ

ಬೆಂಗಳೂರು:  ಕೃಷ್ಣರಾಜಸಾಗರ ಅಣೆಕಟ್ಟೆಗೆ ಪರ್ಯಾಯವಾಗಿ ಮೇಕೆದಾಟು ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ.

ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿಯವರು 2018-19ನೇ ಸಾಲಿನ ಚೊಚ್ಚಲ ಮುಂಗಡ ಪತ್ರ ಮಂಡಿಸಿ, ಪ್ರಸ್ತುತ ಮೇಕೆದಾಟು ಕುರಿತಂತೆ ಪೂರ್ವಕಾರ್ಯ ಸಾಧ್ಯತಾ ವರದಿ ಪ್ರಸ್ತಾವನೆಗೆ ಪ್ರಾಧಿಕಾರದ ಅನುಮೋದನೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದನ್ನು ಚುರುಕುಗೊಳಿಸಿ, ತೀರುವಳಿ ಪಡೆದು, ಯೋಜನೆ ಕಾರ್ಯಗತಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್‌ನ್ನು ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿರುವ ಮುಖ್ಯಮಂತ್ರಿಯವರು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದಾರೆ. ಇದರ ವಿವರವಾದ ಕಾರ್ಯಯೋಜನೆ ಸಿದ್ಧಪಡಿಸಲು ಐದು ಕೋಟಿ ರೂ. ಒದಗಿಸಿದ್ದೇನೆ.

ಅಣೆಕಟ್ಟೆಯ ಬೃಂದಾವನ ಉದ್ಯಾನವನವು 80ರ ದಶಕದಲ್ಲಿ ರಾಷ್ಟ್ರ ಖ್ಯಾತಿ ಗಳಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಕಳೆಗುಂದಿದೆ. ಇದರ ವೈಭವವನ್ನು ಮರುಕಳಿಸಲು ನಮ್ಮ ಸರ್ಕಾರ ಉದ್ದೇಶಿಸಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿಗದಿತ ಸಮಯದಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಸಕ್ಕರೆ ನಗರಿ ಮಂಡ್ಯ ವೇಗವಾಗಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರವಾಗಿದೆ. ಮಂಡ್ಯದ ಸರ್ವತೋಮುಖ ಅಭಿವೃದ್ಧಿಗಾಗಿ 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಮೈಸೂರು-ಬೆಂಗಳೂರು ನಡುವೆ ಐಸಿಬಿ ತಯಾರಿ ಮಾಡುವ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಐಸಿಬಿ ಮತ್ತು ಐಸಿ ಚಿಪ್ಪುಗಳಿಗೆ ವಿಶ್ವಾದ್ಯಂತ ಅಗಾಧವಾದ ಬೇಡಿಕೆ ಇದೆ. ಇಡೀ ಪ್ರಪಂಚದಲ್ಲಿ ಶೇ.80ರಷ್ಟು ಈ ಚಿಪ್ಪುಗಳನ್ನು ತೈವಾನ್‍ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ದೇಶದಲ್ಲಿ ಇದೇ ರೀತಿಯ ಐಸಿಬಿ ಚಿಪ್ಪುಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇಂತಹ ನಿರ್ಣಯ ತೆಗೆದುಕೊಂಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯಲ್ಲಿ ಬರುವ ಗಗನಚುಕ್ಕಿ ಜಲಪಾತ ಸಮೀಪ ಪ್ರವಾಸಿಗರಿಗೆ ಹೆಚ್ಚುವರಿಯಾಗಿ ಮೂಲ ಸೌಕರ್ಯ ಕಲ್ಪಿಸಲು ಐದು ಕೋಟಿ ರೂ. ಒದಗಿಸಿದ್ದಾರೆ.

ಈ ಪ್ರವಾಸಿ ಕೇಂದ್ರಕ್ಕೆ ದಿನದಿಂದ ದಿನಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಸವಲತ್ತು ಕಲ್ಪಿಸುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.

ಮೈಸೂರು, ಬೆಳಗಾವಿ, ಕಲಬುರ್ಗಿ ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ಹಾಗೂ ಇತರೆ ರೋಗಗಳಿಗೆ ಸಂಬಂಧಿಸಿದ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದ್ದಾರೆ.
ಅಲ್ಲದೆ ಚಾಮರಾಜನಗರ, ಹಾಸನ, ಗದಗ, ಕೊಪ್ಪಳ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು 200 ಕೋಟಿ ರೂ. ಒದಗಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಗೂಡು ಮಾರುಕಟ್ಟೆ ಸ್ಥಾಪಿಸುವುದಾಗಿ ಹೇಳಿರುವ ಮುಖ್ಯಮಂತ್ರಿಯವರು ಇದಕ್ಕಾಗಿ ಮೂರು ಕೋಟಿ ರೂ ಮೀಸಲಿರಿಸಿದ್ದಾರೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ರೀಲರ್‍ಗಳಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಉತ್ಪಾದಿಸುವ ರೇಷ್ಮೆ ಗೂಡಿಗೆ ಸ್ಥಳೀಯವಾಗಿ ಮಾರಾಟ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ.