ಇಂದಿನಿಂದ ಬೃಂದಾವನ ಪಂಚಕರ್ಮ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ

ಮೈಸೂರು,ಏ.20(ಆರ್‍ಕೆ)-ಮೈಸೂ ರಿನ ಕೆಆರ್‍ಎಸ್ ರಸ್ತೆಯ ಬೃಂದಾವನ ಬಡಾವಣೆಯ ಸರ್ಕಾರಿ ಆಯುರ್ವೇದ ಪಂಚಕರ್ಮ ಹೈಟೆಕ್ ಆಸ್ಪತ್ರೆ ಕಟ್ಟಡದಲ್ಲಿ ನಾಳೆ (ಏ.21)ಯಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಈವರೆಗೆ ಲಸಿಕೆ ನೀಡುತ್ತಿದ್ದ ಪಿಕೆಟಿಬಿ ಆಸ್ಪತ್ರೆ ಆವರಣದ ಟ್ರಾಮಾ ಕೇರ್ ಸೆಂಟರ್ ಕಟ್ಟಡದಲ್ಲಿ ಕೊರೊನಾ ಸೋಂಕಿತರನ್ನು ದಾಖಲಿಸಿಕೊಳ್ಳುತ್ತಿರುವುದರಿಂದ 45 ವರ್ಷ ಮೇಲ್ಪಟ್ಟವರಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆಯನ್ನು ಬುಧವಾರದಿಂದ ಸರ್ಕಾರಿ ಆಯುರ್ವೇದ ಪಂಚಕರ್ಮ ಆಸ್ಪತ್ರೆ ಯಲ್ಲಿ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಂಗಳ ವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ತಿಳಿಸಿದರು.

ಪ್ರತಿದಿನ 400ರಿಂದ 500 ಮಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಇಂದು ಸಂಜೆಯೇ ಲಸಿಕಾ ಕೇಂದ್ರದ ಸೌಲಭ್ಯವನ್ನು ಪಂಚಕರ್ಮ ಆಸ್ಪತ್ರೆಯ ನೆಲಮಹಡಿಗೆ ಸ್ಥಳಾಂತರಿಸಿ ಬುಧವಾರ ದಿಂದ ಸೇವೆ ಆರಂಭಿಸಲಾಗುವುದು ಎಂದು ಅವರು ಟ್ರಾಮಾ ಕೇರ್ ಸೆಂಟರ್‍ಗೆ ಭೇಟಿ ನೀಡಿದ್ದ ಸಚಿವರಿಗೆ ಮಾಹಿತಿ ನೀಡಿದರು.

ಪಂಚಕರ್ಮ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯನ್ನು ಕಟ್ಟಡದ ಮೊದಲ ಮಹಡಿಯಲ್ಲಿ ಮುಂದು ವರಿಸಲಿದ್ದು, ಹೊರ ಹಾಗೂ ಒಳರೋಗಿ ಗಳ ಸೇವೆ ಎಂದಿನಂತೆ ನಡೆಯಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ರೋಹಿಣಿ ಸಿಂಧೂರಿ ನುಡಿದರು.
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರು ವವರ ನೋಂದಣಿಗೆ ಪ್ರವೇಶ ದ್ವಾರದಲ್ಲಿ ಕಂಪ್ಯೂಟರ್‍ಗಳನ್ನು ಒದಗಿಸಿ ಡೇಟಾ ಎಂಟ್ರಿ ಆಪರೇಟರ್‍ಗಳಿಗೆ ಸೌಲಭ್ಯ ಕಲ್ಪಿಸಿದ್ದು, ಪಕ್ಕದಲ್ಲೇ ಲಸಿಕೆ ನೀಡಿ, ಅದರ ಪಕ್ಕದ ಕೊಠಡಿಯಲ್ಲಿ ಅವರ ನಿಗಾ ವಹಿಸಲು ಮೀಸಲಿರಿಸಲಾಗಿದೆ ಎಂದ ಅವರು, ಬುಧವಾರದಿಂದ ಸಾರ್ವಜನಿಕರು ಸರ್ಕಾರಿ ಆಯುರ್ವೇದ ಪಂಚಕರ್ಮ ಹೈಟೆಕ್ ಆಸ್ಪತ್ರೆಗೆ ಆಗಮಿಸಿ ಕೊರೊನಾ ಲಸಿಕೆ ಪಡೆಯಬೇಕೆಂದು ತಿಳಿಸಿದ್ದಾರೆ.