ಅಪಘಾತದಲ್ಲಿ ಗಾಯಗೊಂಡಿದ ಖ್ಯಾತ ಶಿಲ್ಪಿ ಬಿ.ಎಸ್.ಯೋಗಿರಾಜ್ ಶಿಲ್ಪಿ ಸಾವು

ಮೈಸೂರು,ಸೆ.30-ಅಪಘಾತದಲ್ಲಿ ಗಾಯಗೊಂಡಿದ್ದ ಮೈಸೂರಿನ ಖ್ಯಾತ ಶಿಲ್ಪಿ ಬಿ.ಎಸ್.ಯೋಗಿರಾಜ್ ಶಿಲ್ಪಿ (70) ಅವರು ಚಿಕಿತ್ಸೆ ಫಲಕಾರಿ ಯಾಗದೆ ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೈಸೂರಿನ ಚಾಮರಾಜ ಜೋಡಿ ರಸ್ತೆ ನಿವಾಸಿಯಾದ ಇವರು ಕಳೆದ ಶನಿವಾರ (ಸೆ.25) ಸಂಜೆ ತಮ್ಮ ಆಕ್ಟೀವಾ ಸ್ಕೂಟರ್‍ನಲ್ಲಿ ಲಲಿತ್ ಮಹಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್‍ನಿಂದ ಬಿದ್ದು, ಗಾಯಗೊಂಡಿ ದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಹೃದಯಾಘಾತದಿಂದ ಇಂದು ಸಂಜೆ ಮೃತಪಟ್ಟರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು ವರ್ಗ ಅಗಲಿದ್ದು, ಅವರ ಹುಟ್ಟೂರಾದ ಟಿ.ನರಸೀಪುರ ತಾಲೂಕು ಕೆಬ್ಬೆಹುಂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

ನಾಡಿನ ಶಿಲ್ಪಿಗಳಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದ ಬಿ.ಎಸ್.ಯೋಗಿರಾಜ್ ಶಿಲ್ಪಿ ಅವರು, ತಮ್ಮ ತಂದೆ ಬಿ.ಬಸವಣ್ಣ ಶಿಲ್ಪಿ ಅವರಿಂದ ಸ್ಥಾಪಿಸಲ್ಪಟ್ಟ ಬ್ರಹ್ಮಶ್ರೀ ಶಿಲ್ಪಕಲಾ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಲ್ಪ ಕಲೆಯ ತರಬೇತಿಯನ್ನು ನೀಡಿದ್ದಾರೆ. ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ 7.5ಅಡಿ ಎತ್ತರದ ಯೋಗನರಸಿಂಹಸ್ವಾಮಿ ವಿಗ್ರಹ, ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಗಳ ಅಮೃತ ಶಿಲೆ, ಬೆಂಗಳೂರಿನ ಶಿವಬಾಲ ಯೋಗಿಗಳ ಪ್ರತಿಮೆ, ಬೆಂಗಳೂರಿನ ಕೃಷಿ ವಿವಿಯಲ್ಲಿ 7.5 ಅಡಿ ಎತ್ತರದ ಗಾಂಧಿ ಪ್ರತಿಮೆ, ಮೈಸೂರಿನಲ್ಲಿ ದಿವಂಗತ ಶಾಸಕ ಹೆಚ್.ಎಸ್.ಶಂಕರಲಿಂಗೇಗೌಡ ನಿರ್ಮಿಸಿದ್ದ ಶ್ರೀವೆಂಕಟೇಶ್ವರ ದೇವಾಲಯ ದಲ್ಲಿ 8 ಅಡಿ ಎತ್ತರದ ವೆಂಕಟೇಶ್ವರಸ್ವಾಮಿ, ವರಹಸ್ವಾಮಿ, ಲಕ್ಷ್ಮೀದೇವಿ, ಅಮೃತೇ ಶ್ವರ, ಪಾರ್ವತಿ, ಸತ್ಯನಾರಾಯಣಸ್ವಾಮಿ ವಿಗ್ರಹಗಳನ್ನು ನಿರ್ಮಿಸಿದ್ದಾರೆ.

ಯೋಗಿರಾಜ್ ಶಿಲ್ಪಿ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಲಲಿತ ಕಲಾ ಅಕಡೆಮಿ ಪ್ರಶಸ್ತಿ, ಶಿಲ್ಪ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇವರಿಗೆ ಅಮರ ಶಿಲ್ಪಿ ಜಕಣಚಾರಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.