ಮೈಸೂರಲ್ಲೂ 2ನೇ ದಿನವೂ ಬಸ್ ಸಂಚಾರ ಸ್ಥಗಿತ

ಮೈಸೂರು, ಡಿ.12(ಎಂಟಿವೈ)- ತಮ್ಮನ್ನೂ `ಸರ್ಕಾರಿ ನೌಕರರು’ ಎಂದು ಪರಿಗಣಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರಕ್ಕೆ ಮೈಸೂರಲ್ಲಿ ನಗರ ಹಾಗೂ ಗ್ರಾಮಾಂತರ ವಿಭಾಗದ ಸಿಬ್ಬಂದಿ ಪೂರ್ಣ ಬೆಂಬಲ ನೀಡಿದ ಪರಿಣಾಮ ಶನಿವಾರವೂ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ನೌಕರರು 3 ದಿನಗಳಿಂದ ತೀವ್ರ ಪ್ರತಿಭಟನೆ ನಡೆಸು ತ್ತಿದ್ದಾರೆ. ನೌಕರರ ಸಂಘದ ರಾಜ್ಯ ನಾಯಕರ ಕರೆ ಮೇರೆಗೆ ಮೈಸೂ ರಲ್ಲಿಯೂ ನೌಕರರು ಬಸ್ ಚಾಲನೆಗೆ ನಿರಾಕರಿಸಿದ ಪರಿಣಾಮ ಶನಿವಾರ ಮುಂಜಾನೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು. ಬೆರಳೆಣಿಕೆ ಪ್ರಯಾ ಣಿಕರು ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದರು. ಬೆಂಗಳೂರಲ್ಲಿ ಮುಷ್ಕರ ನಿರತ ನೌಕರರ ಮೇಲೆ `ಎಸ್ಮಾ’ ಜಾರಿ ಆದೇಶ ಹೊರಬೀಳುತ್ತಿದ್ದಂತೆ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ 4.30ರಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮುಷ್ಕರ ಮೈಸೂರಲ್ಲೂ ಶನಿವಾರ ಮುಂದುವರೆಯಿತು. ಮೈಸೂರಲ್ಲಿ ಕುವೆಂಪುನಗರ, ಬನ್ನಿ ಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋ ಗಳಿಂದ ಪ್ರತಿದಿನ 175 ಮಾರ್ಗಗಳಲ್ಲಿ 6 ಸಾವಿರ ಟ್ರಿಪ್ ಸಂಚಾರ ನಡೆಸು ತ್ತಿದ್ದ 450 ಬಸ್‍ಗಳಲ್ಲಿ ಒಂದು ಬಸ್ ಕೂಡಾ ಶನಿವಾರ ರಸ್ತೆಗಿಳಿಯಲಿಲ್ಲ. ಬಸ್ ಗಳನ್ನು ಓಡಿಸುವಂತೆ ಅಧಿಕಾರಿಗಳು ಹೇಳಿದರೂ ಚಾಲಕರು, ನಿರ್ವಾಹಕರು ಒಪ್ಪಲಿಲ್ಲ. ಇದರಿಂದ ನಗರ ವಿಭಾಗಕ್ಕೆ ಶನಿವಾರ 30 ಲಕ್ಷ ರೂ. ನಷ್ಟವಾಯಿತು.

ಗ್ರಾಮಾಂತರ: ವಿವಿಧ ಜಿಲ್ಲೆ, ರಾಜ್ಯಗಳಿಗೆ ಪ್ರತಿದಿನ 700 ಬಸ್‍ಗಳು 2500 ಟ್ರಿಪ್ ಓಡುತ್ತಿದ್ದವು. ಮುಷ್ಕರದಿಂದಾಗಿ ಶನಿವಾರ ಒಂದೂ ಬಸ್ ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮಾಂತರ ವಿಭಾಗಕ್ಕೆ ಶನಿವಾರ 65 ಲಕ್ಷ ರೂ. ವರಮಾನ ಇಲ್ಲವಾಯಿತು.

ಪರದಾಟ: ಮುಷ್ಕರದ ಮಾಹಿತಿಯಿಲ್ಲದೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದ ಹಲವರು ಸಂಚಾರ ಸ್ಥಗಿತಗೊಂಡಿದ್ದನ್ನು ತಿಳಿದು ಚಿಂತೆಗೀಡಾದರು. ಆದರೆ ನಿಲ್ದಾಣದ ಮುಂಭಾಗದಲ್ಲಿ ಸಾಲುಗಟ್ಟಿದ ಟ್ಯಾಕ್ಸಿಗಳು ತಲಾ 300-350 ರೂ ಪಡೆದು ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯಲಾರಂಭಿಸಿದವು. ಸಾಮಾನ್ಯ ದಿನಗಳಲ್ಲಿ ಒಬ್ಬರಿಗೆ 150 ರೂ. ಪಡೆಯುತ್ತಿದ್ದ ಟ್ಯಾಕ್ಸಿಗಳು ಶುಕ್ರವಾರ-ಶನಿವಾರ ದುಪ್ಪಟ್ಟು ಹಣ ಪಡೆದವು. ಟ್ಯಾಕ್ಸಿ, ಕ್ಯಾಬ್ ಚಾಲಕರು ಹೆಚ್ಚುವರಿ ಸಂಪಾದನೆ ಮಾಡಿದರು. ಮಂಡ್ಯ, ಹಾಸನ, ಕುಶಾಲನಗರ, ಕೊಳ್ಳೇಗಾಲ, ಚಾಮರಾಜನಗರ, ಹೆಚ್.ಡಿ.ಕೋಟೆ, ಮಾನಂದವಾಡಿ, ಗುಂಡ್ಲುಪೇಟೆ, ತುಮಕೂರು, ವಿರಾಜಪೇಟೆ ಸೇರಿದಂತೆ ವಿವಿಧ ಪಟ್ಟಣ, ನಗರಗಳಿಗೆ ಪ್ರಯಾಣಿಕರನ್ನು ಖಾಸಗಿ ವಾಹನಗಳ ಚಾಲಕರು ಹೆಚ್ಚು ಹಣ ಪಡೆದು ಕರೆದುಕೊಂಡು ಹೋದರು. ಎರಡೂ ಬಸ್ ನಿಲ್ದಾಣಗಳಲ್ಲಿ ತಲಾ 1 ಕೆಎಸ್‍ಆರ್‍ಪಿ ಹಾಗೂ 2 ಪಿಸಿಆರ್ ವಾಹನಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಆಟೋ ದರ ಹೆಚ್ಚಳ: ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಆಟೋರಿಕ್ಷಾಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಗರ, ಗ್ರಾಮಾಂತರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿದೆಡೆ ಆಟೋರಿಕ್ಷಾಗಳು ಪ್ರಯಾಣಿಕರನ್ನು ಕರೆದೊಯ್ಯುವುದಕ್ಕೆ ಸಾಲುಗಟ್ಟಿ ನಿಂತಿದ್ದವು. ಕೆಲವರು ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರು.