ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಎರಡು ಬಡ ಜೋಡಿಗಳಿಗೆ ಕಂಕಣ ಭಾಗ್ಯ

ಮೈಸೂರು, ಮೇ 27(ಪಿಎಂ)- ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪ ಟ್ಟಿದ್ದ ಎರಡು ಬಡ ಜೋಡಿಗಳ ವಿವಾಹ ವನ್ನು ಸರಳವಾಗಿ ನೆರವೇರಿಸಿಕೊಡುವ ಮೂಲಕ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ ತನ್ನ ಸೇವಾ ಕಾರ್ಯ ಮುಂದುವರೆಸಿದೆ.

ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನಿತ್ಯ ಆಹಾರ ಪೂರೈಕೆ, ದಿನಸಿ ಕಿಟ್ ವಿತರಣೆ, ಅಗತ್ಯ ಔಷಧ ವಿತರಣೆ ಸೇರಿದಂತೆ ಹತ್ತು ಹಲವು ಸೇವಾ ಕಾರ್ಯದಲ್ಲಿ ತೊಡಗಿರುವ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಬಳಗ ಬುಧವಾರ ಬಡ ಕುಟುಂಬದ ಎರಡು ಜೋಡಿಗಳ ವಿವಾಹ ನೆರವೇರಿಸಿದೆ.

ಮೈಸೂರಿನ ಜಯನಗರದ (ಮಳಲ ವಾಡಿ) ಶ್ರೀಮರಳ ಸಿದ್ದೇಶ್ವರಸ್ವಾಮಿ ದೇವ ಸ್ಥಾನದಲ್ಲಿ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಎರಡು ಜೋಡಿಗಳು ಕಾಲಿಟ್ಟವು. ಜಿಲ್ಲಾಡಳಿತದಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಈ ಜೋಡಿಗಳ ವಿವಾಹ ನೆರವೇರಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಜೋಡಿ ಗಳ ವಿವಾಹವನ್ನು ನೆರವೇರಿಸುವ ಮೂಲಕ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಬಳಗ ಬಡ ಕುಟುಂಬಗಳಿಗೆ ನೆರವಾಗಿದೆ.

ಮೈಸೂರಿನ ಕೆಸರೆಯ ದಿ.ಕುಪ್ಪಸ್ವಾಮಿ ಹಾಗೂ ಸೆಲ್ವಿ ದಂಪತಿ ಪುತ್ರ ಕೆ.ಮಂಜು ನಾಥ್ ಮತ್ತು ಹಾಸನ ಜಿಲ್ಲೆಯ ಬೇಲೂ ರಿನ ದಿ.ಮಲ್ಲಯ್ಯ ಹಾಗೂ ದಿ.ಜವರಮ್ಮ ದಂಪತಿ ಪುತ್ರಿ ಕೆ.ಎಂ.ಪ್ರಮೀಳಾ ಸತಿಪತಿ ಗಳಾದ ಮೊದಲ ಜೋಡಿ. ಪ್ರಮೀಳಾ ಮತ್ತು ಕೆ.ಮಂಜುನಾಥ್ ಕಳೆದ 3 ವರ್ಷ ಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಡಾಂಬರ್ ಹಾಕುವ ಕೆಲಸದ ಮೇಲೆ ಬೇಲೂರಿಗೆ ಹೋಗಿದ್ದ ಮಂಜುನಾಥ್‍ಗೆ ಪ್ರಮೀಳಾ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ತಂದೆ ಹಾಗೂ ತಾಯಿ ಇಬ್ಬರೂ ಇಲ್ಲದೆ ಬೇಲೂರಿನ ತನ್ನ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದ ಪ್ರಮೀಳಾ ಇದೀಗ ಮಂಜುನಾಥ್ ಕೈ ಹಿಡಿದಿದ್ದಾರೆ.

ಅದೇ ರೀತಿ ತಿ.ನರಸೀಪುರ ತಾಲೂ ಕಿನ ಮಲಿಯೂರು ಗ್ರಾಮದ ನಾಗರಾಜು ಮತ್ತು ಪವಿತ್ರ ದಂಪತಿ ಪುತ್ರ ಎನ್. ಸುನಿಲ್ ಹಾಗೂ ಮೈಸೂರು ತಾಲೂಕು ಹಡಜನ ಗ್ರಾಮದ ದಿ.ಮರಿಸಿದ್ದಯ್ಯ ಮತ್ತು ದಿ.ಬಸಮ್ಮ ದಂಪತಿ ಪುತ್ರಿ ವಿಜಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮತ್ತೊಂದು ಜೋಡಿ. ಎನ್.ಸುನಿಲ್ ಟ್ರ್ಯಾಕ್ಟರ್ ಚಾಲಕ ನಾಗಿದ್ದು, ತಂದೆ-ತಾಯಿ ಇಲ್ಲದ ವಿಜಯಾ ಹಡಜನ ಗ್ರಾಮದ ತನ್ನ ಅಕ್ಕನ ಮನೆ ಯಲ್ಲಿ ಆಶ್ರಯ ಪಡೆದಿದ್ದರು. ಇದು ವಧು -ವರರ ಕುಟುಂಬಸ್ಥರು ಮುಂದೆ ನಿಂತು ಮಾಡಿಸಿದ ಮದುವೆಯಾಗಿದೆ.

ಅನುಮತಿ ಮೇರೆಗೆ ದೇವಸ್ಥಾನ ಆವ ರಣದಲ್ಲಿ ವಿವಾಹ ಏರ್ಪಡಿಸಿದ ಬಳಗ, ಎರಡೂ ಜೋಡಿಗಳಿಗೆ ಶಾಸ್ತ್ರೋಸ್ತ್ರವಾಗಿ ಹಿಂದೂ ಸಂಪ್ರದಾಯದಂತೆ ಕಂಕಣ ಭಾಗ್ಯ ಕರುಣಿಸಿತು. ಇಬ್ಬರು ವಧುಗಳಿಗೆ ರೇಷ್ಮೆ ಸೀರೆ, 3 ಗ್ರಾಂ ಚಿನ್ನದ ಮಾಂಗಲ್ಯ ಸರ, 16 ಗ್ರಾಂ ಬೆಳ್ಳಿಯ ಕಾಲುಂಗುರ ಹಾಗೂ ಇಬ್ಬರು ವರರಿಗೆ ಪಂಚೆ, ಸಲ್ಯ ಹಾಗೂ ಶರ್ಟ್ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ 50 ಮಂದಿಗೆ ಲಾಡು, ವೆಜಿಟೆಬಲ್ ಬಾತ್ ಹಾಗೂ ಮೊಸರನ್ನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಯಂತೆ ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ಧರಿಸಲಾಗಿತ್ತು.

ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದ ಮೈಮುಲ್ ನಿರ್ದೇಶಕ ಸಿ.ಅಶೋಕ್ ಇದೇ ವೇಳೆ ಮಾತನಾಡಿ, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆ, ಗೃಹ ಪ್ರವೇಶ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಇದೇ ಹಿನ್ನೆಲೆಯಲ್ಲಿ ವಿವಾಹ ಸೇರಿದಂತೆ ಎಲ್ಲಾ ಸಮಾರಂಭ ವನ್ನು ಸರಳವಾಗಿ ಮಾಡಿಕೊಳ್ಳುವ ಮೂಲಕ ಸಾಲಸೋಲ ಮಾಡಿಕೊಳ್ಳುವುದರಿಂದ ದೂರ ವಿರಬಹುದು. ಇಂದು ಬಳಗದ ವತಿಯಿಂದ ಮುಂದೂಡಲ್ಪಟ್ಟಿದ್ದ ಎರಡು ಜೋಡಿಗಳ ವಿವಾಹ ನೆರವೇರಿಸಲಾಗಿದೆ ಎಂದರು.

ಮೈಸೂರಿನ ಅಗ್ರಹಾರದ ಕುದೇರು ಮಠದ ಶ್ರೀಗುರುಶಾಂತ ಸ್ವಾಮೀಜಿ ಸಾನಿಧ್ಯದಲ್ಲಿ ವಿವಾಹ ಕಾರ್ಯಕ್ರಮ ನಡೆ ಯಿತು. ಬಳಗದ ಮುಖಂಡ ಹಾಗೂ ಮೈಸೂರು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ, ಮುಖಂಡರಾದ ವಿಕ್ರಂ ಅಯ್ಯಂಗಾರ್, ಜಿ.ಎಂ.ಪಂಚಾಕ್ಷರಿ, ನಿಖಿಲ್, ಆನಂದ್, ಜಸ್ವಂತ್ ಮತ್ತಿತರರು ಹಾಜರಿದ್ದರು.