ಅಕ್ಟೋಬರ್ 3ರಂದು  ಮಂತ್ರಿಮಂಡಲ ವಿಸ್ತರಣೆ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಅಕ್ಟೋಬರ್ 3ರಂದು ವಿಸ್ತರಿಸಲು ನಿರ್ಧರಿಸಿದ್ದಾರೆ.

ಮೈತ್ರಿ ಪಕ್ಷ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯಂತೆ ತಮ್ಮ ಮಂತ್ರಿ ಮಂಡಲವನ್ನು ವಿಸ್ತರಿಸಿ ಐದರಿಂದ ಆರು ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿ ಕೊಳ್ಳಲಿದ್ದಾರೆ. ಬಹುತೇಕ ಕಾಂಗ್ರೆಸ್‍ಗೆ ನಿಗದಿಯಾಗಿ ಸಂಪುಟದಲ್ಲಿ ಖಾಲಿ ಉಳಿ ದಿರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡ ಲಿದ್ದು, ಕಾಂಗ್ರೆಸ್ ವರಿಷ್ಠರು ಹೆಸರಿಸುವವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರ್ಪಡೆ ಮಾಡಿಕೊಳ್ಳ ಲಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಚಿಕ್ಕಬಳ್ಳಾಪುರ ಪ್ರವಾಸವನ್ನು ರದ್ದುಪಡಿಸಿ ಮಂತ್ರಿಮಂಡಲ ವಿಸ್ತರಣೆ ಕಾರ್ಯಕ್ಕಾಗಿ ಅಂದಿನ ದಿನವನ್ನು ಮೀಸ ಲಿಟ್ಟಿದ್ದಾರೆ. ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿ, ಅಕ್ಟೋಬರ್ 3ರಂದು ಮಂತ್ರಿಮಂಡಲ ವಿಸ್ತರಣೆ ಆಗಲಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂ ರಾವ್, ಅಕ್ಟೋಬರ್ 10ರೊಳಗೆ ಯಾವುದೇ ದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಿ ಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಈ ಬಾರಿ ತನ್ನ ಸಚಿವ ಕೋಟಾದಲ್ಲಿನ ಪಕ್ಷೇತರ ಅಭ್ಯರ್ಥಿ, ಅರಣ್ಯ ಸಚಿವ ಆರ್. ಶಂಕರ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳು ಕೇಳಿಬರುತ್ತಿವೆ. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಲು ಹೊರಟಿದ್ದ ಶಂಕರ್‍ಗೆ ಶಾಕ್ ನೀಡಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್‍ನ ಕೋಟಾದಲ್ಲಿ 2 ಸ್ಥಾನಗಳನ್ನು ವೀರಶೈವ ಸಮಾಜಕ್ಕೂ, ಉಳಿದ ನಾಲ್ಕು ಸ್ಥಾನಗಳಲ್ಲಿ ಕುರುಬ, ಮುಸ್ಲಿಂ, ಪರಿಶಿಷ್ಟ ಜಾತಿ ಹಾಗೂ ಎಡಗೈ ದಲಿತರೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸಲಿದೆ. ಒಂದು ವೇಳೆ ಶಂಕರ್ ಅವರನ್ನು ಕೈಬಿಟ್ಟರೆ, ಸಂಪುಟದಲ್ಲಿ ಕುರುಬ ಸಮುದಾಯವನ್ನು ಪ್ರತಿ ನಿಧಿಸುತ್ತಿರುವ ಅವರ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ.