ಗ್ರಾಮ ಸಮರದಲ್ಲಿ ವಾಮಾಚಾರದ ಮೊರೆ ಹೋದ ಅಭ್ಯರ್ಥಿಗಳು!!

ಮೈಸೂರು, ಡಿ.26-ಪ್ರತಿಷ್ಠೆಯ ಕಣವಾಗಿ ಮಾರ್ಪ ಟ್ಟಿರುವ ಎರಡನೇ ಹಂತದ ಚುನಾವಣೆಗೆ ತೆರೆಮರೆ ಯಲ್ಲಿನ ಓಲೈಕೆಯ ಕಸರತ್ತು ನಡೆದಿದೆ. ಶತಾ ಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕೆಲ ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗಿ, ಕಣ್ಕಪ್ಪಿನ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಲೋಕಸಭೆ, ವಿಧಾನಸಭೆಗೆ ನಡೆಯುವ ಚುನಾ ವಣೆಯನ್ನೂ ಗ್ರಾಮ ಪಂಚಾಯಿತಿ ಚುನಾವಣೆ ಮೀರಿಸಿದೆ. ರಾಜಕೀಯ ಪಕ್ಷಗಳ ನೇರ ಪಾಲ್ಗೊಳ್ಳು ವಿಕೆ ಇಲ್ಲದೇ ಇದ್ದರೂ, ಗ್ರಾಮ ಸಮರಕ್ಕೆ ಮಿತಿ ಮೀರಿದ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ಭಾಗ ವಹಿಸುವಿಕೆ ಇದ್ದಂತಿದೆ. ಇದರಿಂದ ಸಮರಸದ ಭಾವೈಕ್ಯತೆ ಮೂಡಿದ್ದ ಗ್ರಾಮೀಣ ಪ್ರದೇಶದಲ್ಲಿ ಇದೀಗ ಗುಂಪುಗಾರಿಕೆಗೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ವಾಮಾಚಾರದ ವಾಸನೆ ಈ ಬಾರಿ ಹೆಚ್ಚಾಗಿ ಗೋಚರಿಸುತ್ತಿರುವುದು ಅಭ್ಯರ್ಥಿಗಳು ಹಾಗೂ ಮತದಾರರಲ್ಲಿ ಆತಂಕ ಸೃಷ್ಟಿಸಿದೆ.

ಕಣ್ಕಪ್ಪಿನ ಭಯ: ಮತದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸುತ್ತಿರುವ ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ದವರು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಯಲ್ಲಿ ತೊಡಗಿದ್ದಾರೆ. ಆದರೂ ಕೆಲವು ಅಭ್ಯರ್ಥಿ ಗಳಿಗೆ ಗೆಲುವಿನ ಬಗ್ಗೆ ವಿಶ್ವಾಸವಿಲ್ಲದೆ ಮಾಟಮಂತ್ರದ ಮೊರೆ ಹೋಗಿರುವುದು ಮತದಾರರಿಗೆ ಆತಂಕ ವನ್ನುಂಟುಮಾಡಿದೆ. ಪ್ರತಿಷ್ಠೆ ಪ್ರಶ್ನೆಯಾಗಿ ಕಾಡುತ್ತಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಛಲದಿಂದ ಕೆಲವು ಮಂತ್ರವಾದಿಗಳು ಕೊಟ್ಟ `ಕಪ್ಪು’(ಕಣ್ಕಪ್ಪಿನಂತಿರುವುದು) ಅನ್ನು ಕೈಗೆ ಲೇಪನ ಮಾಡಿಕೊಂಡು ಮತಯಾಚನೆ ವೇಳೆ ಭಿತ್ತಿ ಪತ್ರ ಕೊಡುವ ನೆಪದಲ್ಲಿ, ಕಾಲಿಗೆ ಬೀಳುವ ನಾಟಕವಾಡಿ ಮತದಾರರಿಗೆ ಕಪ್ಪಿನ ಸ್ಪರ್ಶವಾಗುವಂತೆ ಮಾಡುತ್ತಿದ್ದಾರೆ. ಇದರ ಸುಳಿವರಿತ ಮತದಾರರು ಮತಯಾಚನೆಗೆ ಅಭ್ಯರ್ಥಿಗಳಾಗಲೀ ಅಥವಾ ಅವರ ಬೆಂಬಲಿಗರಾಗಲೀ ಸಮೀಪ ಬಂದರೆ ಹೌಹಾರು ವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂರು ದಾರಿಯಲ್ಲಿ: ಒಂದೆಡೆ ಕಪ್ಪಿನ ಪ್ರಯೋಗ ವಾಗುತ್ತಿದ್ದರೆ, ಮತ್ತೊಂದೆಡೆ ಮೂರು ದಾರಿ ಕೂಡುವ ಸ್ಥಳ(ಜಂಕ್ಷನ್)ದಲ್ಲಿ ಮಡಿಕೆ, ಕುಡಿಕೆ, ತೆಂಗಿನಕಾಯಿ, ನಿಂಬೆಹಣ್ಣು, ಕೋಳಿ ಮೊಟ್ಟೆ ಹೊಡೆಯುತ್ತಿದ್ದಾರೆ. ಅಲ್ಲದೆ ಹರಿಶಿನ, ಕುಂಕುಮ ಸುರಿದು ಮತದಾರರನ್ನು ತನ್ನತ್ತ ಸೆಳೆಯುವ ಹಾಗೂ ಎದುರಾಳಿಯನ್ನು ವಾಮಮಾರ್ಗದ ಮೂಲಕ ಕುಗ್ಗಿಸುವ ತಂತ್ರಗಾರಿಕೆ ವ್ಯಾಪಕವಾಗಿದೆ ಎಂದು ಹೇಳಲಾಗುತ್ತಿದೆ.

ಕಪ್ಪು ಕೋಳಿ: ಚುನಾವಣಾ ಕಣದಲ್ಲಿ ಹಣಾಹಣಿ ನಡೆಸುತ್ತಿರುವ ಅಭ್ಯರ್ಥಿಗಳಲ್ಲಿ ಕೆಲವರು ಮಂತ್ರವಾದಿ ಗಳ ಮಾತು ಕೇಳಿ ಕಪ್ಪು ಬಣ್ಣದ ಕೋಳಿ ಮರಿಯನ್ನು ಬಲಿಕೊಡುತ್ತಿದ್ದಾರೆ. ಬಲಿಕೊಟ್ಟ ಬಳಿಕ ಅದರ ರಕ್ತವನ್ನು ಎದುರಾಳಿ ಅಭ್ಯರ್ಥಿಗಳು ಬಳಸುವ ವಾಹನದ ಮೇಲೆ ಕದ್ದು ಮುಚ್ಚಿ ಲೇಪಿಸುವುದು, ಮನೆ ಮುಂದೆ ರಕ್ತ ಸುರಿದು ಹೋಗುತ್ತಿದ್ದಾರೆ. ಎದುರಾಳಿ ಕೃತ್ಯಕ್ಕೆ ಅಭ್ಯರ್ಥಿಗಳು ಮಾತ್ರವಲ್ಲದೆ, ಮತದಾರರು ತತ್ತರಿಸುವಂತಾಗಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಮಂತ್ರವಾದಿಗಳ ಏಜೆಂಟರು: ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದೆಂದು ಅಭ್ಯರ್ಥಿ ಗಳ ಕಿವಿ ಊದಲು ಮಂತ್ರವಾದಿಗಳ ಏಜೆಂಟರು ಸಕ್ರಿಯ ವಾಗಿದ್ದಾರೆ. ಊಹಾಪೋಹದ ಮಾತನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿ ಅಭ್ಯರ್ಥಿ ಅಥವಾ ಬೆಂಗಲಿಗರ ಮನವೊಲಿಸಿ ಕೆಲವು ಮಂತ್ರಿವಾದಿಗಳ ಬಳಿ ಕಳುಹಿಸಿ ಮಡಿಕೆ, ಕುಡಿಕೆ ಕೊಟ್ಟು ಕಳುಹಿಸುತ್ತಿ ದ್ದಾರೆ. ಗೆಲ್ಲುವ ಹಠದಿಂದ ಅಭ್ಯರ್ಥಿಗಳು ಮಂತ್ರಿವಾದಿ ಗಳ ಮಡಿಲಿಗೆ ಅಪಾರ ಪ್ರಮಾಣದ ಹಣ ಸುರಿಯು ತ್ತಿದ್ದಾರೆ. ನೆರೆ ಜಿಲ್ಲೆಗಳಿಂದಲೂ ಏಜೆಂಟರು ವಿವಿಧ ಗ್ರಾಮಗಳಿಗೆ ಧಾವಿಸಿ, ಅಭ್ಯರ್ಥಿಗಳನ್ನು ಓಲೈಸಲು ಸಫಲರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಎಂ.ಟಿ.ಯೋಗೇಶ್‍ಕುಮಾರ್