ಮೈಸೂರು, ಏ.12(ಪಿಎಂ)-ಕೊರೊನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ (ಗೃಹ ದಿಗ್ಬಂಧನ) ಆಗಿದ್ದ ನಂಜನಗೂಡು ಜುಬಿಲಂಟ್ ಕಾರ್ಖಾನೆ ಕಾರ್ಮಿಕರೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡಿ ಆತಂಕ ಸೃಷ್ಟಿಸಿದ್ದು, ಸದರಿ ಕಾರ್ಮಿಕನ ವಿರುದ್ಧ ನಂಜನಗೂಡು ಗ್ರಾಮಾಂ ತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಂಜನಗೂಡು ವಿಎ ಬಡಾವಣೆ ನಿವಾಸಿ, ಜುಬಿಲಂಟ್ ಕಾರ್ಖಾನೆ ಕಾರ್ಮಿಕನನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಿದ್ದು, ಕೈಗೆ ಸೀಲ್ ಹಾಕಿ, ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಮತ್ತು ವೈದ್ಯರ ಸಲಹೆ ಧಿಕ್ಕರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ನಂಜನಗೂಡು ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಕಲಂ 188, 269, 271 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಜುಬಿ ಲಂಟ್ ಜೆನೆರಿಕ್ಸ್ ಕಾರ್ಖಾನೆಯಲ್ಲಿ 1500ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈವರೆಗೆ ಇಲ್ಲಿ ಕೆಲಸ ಮಾಡುತ್ತಿರುವ 23 ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮಾ.26 ಮತ್ತು 27ರಂದು ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಗಳು ಜುಬಿಲಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ 1500ಕ್ಕೂ ಹೆಚ್ಚು ಕಾರ್ಮಿಕರ ಕೈಗಳಿಗೆ ಸೀಲ್ ಹಾಕಿ, ಹೋಂ ಕ್ವಾರಂಟೈನ್ ಆಗಿ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದರು. ಜೊತೆಗೆ 14 ದಿನಗಳ ಹೋಂ ಕ್ವಾರಂಟೈನ್ ಅನ್ನು ಡಿಸಿ ಹೆಚ್ಚುವರಿಯಾಗಿ ಇನ್ನೂ 14 ದಿನಗಳವರೆಗೆ ಮುಂದುವರೆಸಿದ್ದಾರೆ. ಆದಾಗ್ಯೂ ಸದರಿ ಕಾರ್ಮಿಕ ನಿರ್ಲಕ್ಷ್ಯತೆಯಿಂದ ಮನೆಯಲ್ಲಿ ಪ್ರತ್ಯೇಕವಾಗಿ ಇರದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿ ದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.