ಸಿಡಿ ಯುವತಿಗೆ ಈಗಾಗಲೇ ಕೆಲವರಿಂದ ರಕ್ಷಣೆ ಸಿಕ್ಕಿದೆ

ಮೈಸೂರು,ಮಾ.14(ಎಂಟಿವೈ)-ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಗೆ ಯಾರಿಂದ ರಕ್ಷಣೆ ಸಿಗಬೇಕಿದೆಯೋ ಅವರಿಂದ ರಕ್ಷಣೆ ಸಿಕ್ಕಿದೆ. ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದೇ ಇದ್ದರೂ, ಆ ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರದ ಒಳಗಿರುವವರೋ ಅಥವಾ ಸರ್ಕಾರದ ವಿರುದ್ಧ ಇರುವ ಯಾರೋ ಆ ಯುವತಿಗೆ ರಕ್ಷಣೆ ಕೊಟ್ಟಿದ್ದಾರೆ. ಆ ಮನುಷ್ಯನ (ರಮೇಶ್ ಜಾರಕಿಹೊಳಿ) ಸ್ಪೀಡ್‍ಗೆ ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೇ ಆ ಯುವತಿಗೆ ರಕ್ಷಣೆ ಕೊಟ್ಟಿರಲೂಬಹುದು. ಒಟ್ಟಿನಲ್ಲಿ ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದ್ದೇ ಇದೆ. ಡಿ.ಕೆ.ಶಿವಕುಮಾರ್ ಹೆಸರನ್ನು ಯಾರಾದರು ಹೇಳಿದ್ರಾ? ರಾಜ್ಯದಲ್ಲಿ ಮಹಾ ನಾಯಕರು ತುಂಬಾ ಜನ ಇದ್ದಾರೆ. ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಕೆಲವರು ಮಹಾನ್ ನಾಯಕರಾಗಿ ಬೆಳೆದಿದ್ದೇವೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸಿಡಿ ಪ್ರಕರಣದ ಮಹಾನ್ ನಾಯಕರು ಎಂದು ಯಾರನ್ನು ಹೇಳಿದ್ದಾರೋ ನಮಗೆ ತಿಳಿದಿಲ್ಲ. ಹೀಗಿರುವಾಗ ಡಿ.ಕೆ.ಶಿವಕುಮಾರ್ ಯಾಕೆ ತಮ್ಮ ಹೆಸರು ತಾವೇ ಹೇಳಿ ಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅವರು ಪ್ರಬುದ್ಧ ರಾಜಕಾರಣಿ. ಅನವಶ್ಯಕವಾಗಿ ತಮ್ಮ ಹೆಸರನ್ನು ಈ ಪ್ರಕರಣದಲ್ಲಿ ಯಾಕೆ ಸಿಲುಕಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದರು.

ಈ ಪ್ರಕರಣವನ್ನು ತಮಾಷೆ ಹಾಗೂ ಹುಡುಗಾಟದಿಂದ ನೋಡುತ್ತಿದ್ದಾರೆ. ಯಾರಿಗೂ ಅದರ ಗಂಭೀರತೆ ಅರ್ಥವಾಗುತ್ತಿಲ್ಲ. ಈ ಪ್ರಕರಣದಿಂದ ರಾಜ್ಯದ ಗೌರವ ಹಾಳಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಎಸ್‍ಐಟಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ರಾಜ್ಯದ ಗೌರವ, ಮಾನ-ಮರ್ಯಾದೆ ಉಳಿಸಲು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶ ಹೊರಗೆ ತರಬೇಕು. ಅಲ್ಲದೇ ತಾರ್ಕಿಕ ಅಂತ್ಯ ಕಾಣುವವರೆಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತ ಯುವತಿಯು ವೀಡಿಯೋ ರೆಕಾರ್ಡ್ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾಳೆ. ಆ ವೀಡಿಯೋವನ್ನು ಬೇರೆ ಯಾರಾದರೂ ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ, ಇಲ್ಲವೋ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ಇದುವರೆಗೆ ಸರ್ಕಾರದಿಂದ ನಡೆದಿರುವ ಯಾವುದೇ ತನಿಖೆ ತಾರ್ಕಿಕ ಅಂತ್ಯ ಕಂಡಿಲ್ಲ. ಇಡೀ ದೇಶದ ವ್ಯವಸ್ಥೆ ಅದೇ ಮಾದರಿ ಯಲ್ಲಿದೆ. ಯಾರನ್ನಾದರೂ ರಾಜಕೀಯವಾಗಿ ಮುಗಿಸುವಾಗ ಹಾಗೂ ಅವಹೇಳನ ಮಾಡಬೇಕೆಂದು ಸಂಚು ನಡೆಸುವವರು ಸಣ್ಣಪುಟ್ಟ ತಪ್ಪುಗಳನ್ನೇ ಮುಂದಿಟ್ಟುಕೊಂಡು ಅಧಿಕಾರದಲ್ಲಿ ಇದ್ದವರ ಬೆಳವಣಿಗೆ ತಾತ್ಕಾಲಿಕವಾಗಿ ಕುಂಠಿತಗೊಳಿಸುವಲ್ಲಿ ಯಶಸ್ವಿ ಯಾಗುತ್ತಾರೆ. ಇಂತಹ ವ್ಯವಸ್ಥಿತ ಬೆಳವಣಿಗೆ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಹೆಣ್ಣು ಮಗಳಿಗೆ ನ್ಯಾಯ ಸಿಗುತ್ತದೆಯೋ, ಇಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೋ ಗೊತ್ತಿಲ್ಲ. ಯಾರನ್ನು ನಾನು ಸಂತ್ರಸ್ತರು ಎನ್ನಬೇಕು ಎಂಬುದು ತಿಳಿಯುತ್ತಿಲ್ಲ ಎಂದರು.