ಕೆ.ಹೆಚ್.ರಾಮಯ್ಯರ 140ನೇ ಜಯಂತ್ಯೋತ್ಸವ ಆಚರಣೆ

ಮೈಸೂರು:  ವಿವಿಪುರಂನ ಕೆ.ಹೆಚ್.ರಾಮಯ್ಯರವರ ಹಾಸ್ಟೆಲ್ ಸಭಾಂಗಣದಲ್ಲಿ ಒಕ್ಕಲಿಗರ ರತ್ನ ಕೆ.ಹೆಚ್.ರಾಮಯ್ಯರವರ 140ನೇ ಜಯಂತ್ಯೋತ್ಸವನ್ನು ಗುರುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರು ಕೆ.ಹೆಚ್.ರಾಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಮ್ಮ ತುಳಸಿದಾಸ್ ಮಾತನಾಡಿ, ಕೆ.ಹೆಚ್.ರಾಮಯ್ಯರವರು ಒಂದು ದಿನ ವಾಯು ವಿಹಾರಕ್ಕೆ ಹೋಗಿದ್ದ ವೇಳೆ ಒಬ್ಬ ಹುಡುಗ ಬೀದಿ ದೀಪದ ಬೆಳಕಲ್ಲಿ ಓದುತ್ತಿದ್ದ. ಇದನ್ನು ಕಂಡ ರಾಮಯ್ಯ, ಇಲ್ಲಿ ಯಾಕೆ ಓದುತ್ತಿದ್ದೀಯಾ? ಎಂದು ಕೇಳಿದರು. ನಮ್ಮ ಮನೆಯಲ್ಲಿ ವಿದ್ಯುತ್ ಇಲ್ಲ. ಹಾಗಾಗಿ ಬೀದಿ ದೀಪದ ಬೆಳಕಲ್ಲಿ ಓದುತ್ತಿದ್ದೇನೆಂದು ಹೇಳುತ್ತಾನೆ. ಆಗ ರಾಮಯ್ಯರು ಮನೆಯ ವಿಳಾಸ ನೀಡಿ, ಮರುದಿನ ಬೆಳಿಗ್ಗೆ ಬರುವಂತೆ ತಿಳಿಸುತ್ತಾರೆ. ಅದರಂತೆ ಹುಡುಗ ಮನೆಗೆ ಹೋಗುತ್ತಾನೆ. ಆಗ ರಾಮಯ್ಯರು ಓದಿಕೊಂಡು ಮನೆಯಲ್ಲಿರು ಎಂದು ಹೇಳುತ್ತಾರೆ. ಅತ ಅಲ್ಲೇ ಇದ್ದು ಬಿಎ ವ್ಯಾಸಂಗ ಮಾಡುತ್ತಾನೆ ಎಂದರು.

ನಂತರದಲ್ಲಿ ರಾಮಯ್ಯರು ಲಂಡನ್‍ಗೆ ಹೋಗುತ್ತಾರೆ. ಈ ವೇಳೆ ಹುಡುಗನಿಗೆ ಶಾಲೆಯ ಪ್ರವೇಶ ಶುಲ್ಕ ಪಾವತಿಸಲು ಹಣವಿಲ್ಲದೇ ಪರಿತಪಿಸುತ್ತಿದ್ದರೂ ಕುಟುಂಬದ ಗಮನಕ್ಕೆ ತರುವುದಿಲ್ಲ. ಒಮ್ಮೆ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಸದಿದ್ದರೆ ಶಾಲೆಗೆ ಸೇರಿಸುವುದಿಲ್ಲ ಎಂದು ಹೇಳುತ್ತಾರೆ. ನಂತರ ಕುಟುಂಬದವರೇ ಶುಲ್ಕ ಪಾವತಿಸಿ ವ್ಯಾಸಂಗ ಮಾಡಲು ಪ್ರೋತ್ಸಾಹಿಸಿದರು ಎಂದ ಅವರು, ಚುಂಚನಗಿರಿ ಆಶ್ರಮವನ್ನು ಆರಂಭಿಸಿದಾಗ ರಾಮಯ್ಯರವರು, ಸಾಂಸಾರಿಕ ಜೀವನದಲ್ಲಿ ಬೇಸರಗೊಂಡು ಬೆಟ್ಟದ ಮೇಲೆ ತಪಸ್ಸು ಮಾಡುತ್ತಿದ್ದರು. ಅವರನ್ನು ಕರೆ ತಂದು ಸ್ವಾಮೀಜಿಯನ್ನಾಗಿ ಮಾಡಿದರು ಎಂದು ಹೇಳಿದರು.

ಕೆ.ಹೆಚ್.ರಾಮಯ್ಯ ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ಮಂದಿ ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ, ಯಾರೋಬ್ಬರೂ ರಾಮಯ್ಯರವರ ಹೆಸರನ್ನು ರಸ್ತೆಗಾಗಲಿ, ಮೊಹಲ್ಲಾಗಳಿಗಾಗಲಿ ಇಟ್ಟಿಲ್ಲ. ಸ್ಮರಿಸುತ್ತಿದ್ದಾರಾ ಎಂಬುದು ಗೊತ್ತಿಲ್ಲ. ಮುಂದಿನ ಪೀಳಿಗೆಯಾದರೂ ಅವರನ್ನು ಸ್ಮರಿಸುವ ಕೆಲಸ ಮಾಡಲಿ ಎಂದರು.
ಮಾಜಿ ಮೇಯರ್ ಪಿ.ವಿಶ್ವನಾಥ್, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಕೆ.ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.