ಐದು ಕಡೆ ವೃದ್ಧೆಯರ ಸರ ಕಿತ್ತುಕೊಂಡು ಪರಾರಿ

ಮೈಸೂರು: ಮೈಸೂರು ನಗರದಲ್ಲಿ ಸರಗಳವು ತುಂಬಾ ಆಘಾತಕಾರಿ ಹಂತ ತಲುಪಿದೆ. ಇದು ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಅದರಲ್ಲೂ ಮಹಿಳೆಯರು ಚಿನ್ನದ ಸರ ಧರಿಸಿ ರಸ್ತೆಯಲ್ಲಿ ಹಗಲು ವೇಳೆ ಯಲ್ಲೂ ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಅಪರಿಚಿತ ಬೈಕ್ ಸವಾರರಿಬ್ಬರು ಗುರುವಾರ ಬೆಳಿಗ್ಗೆ ಕೇವಲ ಒಂದೂವರೆ ಗಂಟೆ ಯಲ್ಲಿ 5 ಕಡೆ ವಯಸ್ಸಾದ ಮಹಿಳೆಯರ ಕೊರಳಿಂದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಐದೂ ಪ್ರಕರಣಗಳಲ್ಲಿ ವೃದ್ಧೆಯರನ್ನೇ ಗುರಿಯಾಗಿಸಿ ಸರಗಳ್ಳರು ಕೈಚಳಕ ತೋರಿರುವುದು ಹಿರಿಯ ನಾಗರಿಕರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಮೈಸೂರಿನ ವಿದ್ಯಾರಣ್ಯಪುರಂ ಲಿಂಕ್‍ರಸ್ತೆ ನಿವಾಸಿ ಶ್ರೀಮತಿ ಜಯಮ್ಮ(60) ಅಕ್ಕಮಹಾ ದೇವಿ ರಸ್ತೆಯ ಶ್ರೀಮತಿ ಜಯಲಕ್ಷ್ಮಿ(65), ಇಟ್ಟಿಗೆಗೂಡಿನ ಶ್ರೀಮತಿ ಸುಗುಣಾದೇವಿ(79), ಗೋಕುಲಂ ಮೊದಲನೇ ಹಂತದ ಶ್ರೀಮತಿ ಗಾಯತ್ರಿ (55) ಹಾಗೂ ಉನ್ನತಿನಗರ (ಹ್ಯಾಂಡಿಕ್ರಾಫ್ಟ್ ನಗರ) ನಿವಾಸಿ ಶ್ರೀಮತಿ ಲಲಿತಮ್ಮ(80) ಖದೀಮರ ಕೈಚಳಕದಿಂದ ಚಿನ್ನದ ಆಭರಣ ಕಳೆದುಕೊಂಡವರು. ಬೈಕ್ ಸವಾರ ವೃದ್ಧೆಯರ ಕೊರಳಿಂದ ಸರವನ್ನು ಜೋರಾಗಿ ಎಳೆದು ಕಿತ್ತು ಕೊಂಡಿದ್ದರಿಂದ ಗಾಯತ್ರಿ ಅವರ ತಲೆಗೆ ದೊಡ್ಡ ಪೆಟ್ಟು ಬಿದ್ದಿದೆ. ಸುಗುಣಾದೇವಿ ಅವರೂ ಸರಗಳ್ಳರ ದಾಳಿಯಲ್ಲಿ ರಸ್ತೆಗೆ ಬಿದ್ದಿದ್ದರಿಂದ ಮುಖದಲ್ಲಿ ಎರಡು-ಮೂರು ಕಡೆ ಗಾಯವಾಗಿದೆ. ಇಬ್ಬ ರಿಗೂ ಬ್ಯಾಂಡೇಜ್ ಹಾಕಲಾಗಿದೆ.

ಬೆಳಿಗ್ಗೆ 6.35: ವಿದ್ಯಾರಣ್ಯಪುರಂನ ಲಿಂಕ್ ರಸ್ತೆ ನಿವಾಸಿ ಜಯಮ್ಮ ಅವರು, ಜೋಡಿ ರಸ್ತೆ ಬಳಿಯ ಅಪಾರ್ಟ್‍ಮೆಂಟ್ ಪಕ್ಕದಲ್ಲಿ ಬೆಳಿಗ್ಗೆ 6.35 ಗಂಟೆ ವೇಳೆ ವಾಯುವಿಹಾರದಲ್ಲಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಬಂದ ಯುವಕರಿ ಬ್ಬರು, 22 ಗ್ರಾಂನ ಚಿನ್ನದ ಸರದ ತುಣುಕು ಕಿತ್ತು ಪರಾರಿಯಾದರು.

ಬೆಳಿಗ್ಗೆ 6.45 ಗಂಟೆ: ವಿದ್ಯಾರಣ್ಯಪುರಂನ ಅಕ್ಕಮಹಾದೇವಿ ರಸ್ತೆಯಲ್ಲಿ ಬೆಳಿಗ್ಗೆ 6.45 ಗಂಟೆ ವೇಳೆ ವಾಯುವಿಹಾರಕ್ಕೆ ತೆರಳಿದ್ದ ಜಯಲಕ್ಷ್ಮಿ ಅವರ ಬಳಿ ಹಠಾತ್ತನೆ ಬಂದ ಬೈಕ್ ಸವಾರರು, ಅವರ ಕೊರಳಲ್ಲಿದ್ದ 40 ಗ್ರಾಂ ಸರ ಕೀಳಲೆತ್ನಿಸಿದ್ದಾರೆ. ಜಯಲಕ್ಷ್ಮಿ ಅವರು ಸರವನ್ನು ಬಿಗಿಯಾಗಿ ಹಿಡಿದಿದ್ದರಿಂದ ಕಳ್ಳರ ಕೈಗೆ 12 ಗ್ರಾಂನ ತುಣುಕು ಸಿಕ್ಕಿದೆ. ಬಳಿಕ ಕಳ್ಳರು ಜೋಡಿ ರಸ್ತೆ ಕಡೆಗೆ ವೇಗವಾಗಿ ಕಣ್ಮರೆಯಾಗಿದ್ದಾರೆ.

ಬೆಳಿಗ್ಗೆ 6.55 ಗಂಟೆ: ನಜರ್‍ಬಾದ್‍ನ ಇಟ್ಟಿಗೆಗೂಡು ನಿವಾಸಿ ಸುಗುಣಾದೇವಿ ಅವರು ಹಾಲು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ಕರಗ ದೇವಸ್ಥಾನದ ಸಮೀಪ ಬೆಳಿಗ್ಗೆ 6.55 ಗಂಟೆಗೆ ಹಿಂದಿನಿಂದ ಬಂದ ಬೈಕ್ ಸವಾರರು 40 ಗ್ರಾಂ ಚಿನ್ನದ ಸರ ಎಗರಿಸಿದ್ದಾರೆ. ಘಟನೆ ನಡೆಯುವ ಕೇವಲ 8 ನಿಮಿಷ ಮೊದಲಷ್ಟೇ ನಜರ್‍ಬಾದ್ ಠಾಣೆಯ ಗರುಡ ವಾಹನ ಇಲ್ಲಿ ಸಾಗಿ ಹೋಗಿತ್ತು. ಸದಾ ಜನದಟ್ಟಣೆ ಇರುವಂತಹ ಸ್ಥಳದಲ್ಲಿಯೂ ಸರಗಳ್ಳರು ತಮ್ಮ ಕೈಚಳಕ ತೋರಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ರಸ್ತೆಯಲ್ಲಿ ಓಡಾಡುವುದು ಹೇಗೆ ಎಂದು ಚಿಂತೆಗೊಳಗಾಗುವಂತೆ ಮಾಡಿದೆ.

ಬೆಳಿಗ್ಗೆ 7 ಗಂಟೆ: ಗೋಕುಲಂ ಮೊದಲನೇ ಹಂತದ ಕೆಆರ್‍ಎಸ್ ರಸ್ತೆಗೆ ಹೊಂದಿಕೊಂಡಂತಿರುವ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಳಿಯಲ್ಲಿ ಗಾಯತ್ರಿ ಎಂಬುವರು ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಗ ದಾಳಿ ನಡೆಸಿದ ಖದೀಮರು 4 ಗ್ರಾಂನ ಚಿನ್ನದ ತಾಳಿಯನ್ನು ಅಪಹರಿಸಿದ್ದಾರೆ.

ಮನೆ ಮಂದಿ ಎಲ್ಲಾ ತಿರುಪತಿ ಯಾತ್ರೆಗೆ ಹೋಗಲು ಸಿದ್ಧರಾಗುತ್ತಿದ್ದರಿಂದ ಗಾಯತ್ರಿ ಅವರು ಮನೆ ಬಾಗಿಲಲ್ಲಿ ನೀರು ಹಾಕಿ ರಂಗೋಲಿ ಹಾಕುತ್ತಿದ್ದರು. 40 ಗ್ರಾಂ ಚಿನ್ನದ ಸರವನ್ನು ಗಾಯತ್ರಿ ಅವರು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿ ದ್ದರಿಂದ ಸರ ಉಳಿದು ಮಾಂಗಲ್ಯ ಮಾತ್ರ ಕಳ್ಳರ ಪಾಲಾಯಿತು.

ಬೆಳಿಗ್ಗೆ 8 ಗಂಟೆ: ಎನ್‍ಆರ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆ ಸಮೀಪ ಉನ್ನತಿನಗರ ಬಡಾವಣೆಯಲ್ಲಿ ಮನೆ ಸಮೀಪವೇ ನಿಂತಿದ್ದ ಲಲಿತಮ್ಮ ಅವರ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಖದೀಮರು ಕಿತ್ತುಕೊಂಡು ರಿಂಗ್ ರಸ್ತೆ ಮೂಲಕ ಪರಾರಿಯಾಗಿದ್ದಾರೆ.

ಪೊಲೀಸರಿಗೆ ಸವಾಲ್: ಕೇವಲ ಒಂದೂವರೆ ತಾಸಿನಲ್ಲಿ ಬೈಕ್ ಸವಾರರಿಬ್ಬರು ಹತ್ತು ನಿಮಿಷಕ್ಕೊಂದರಂತೆ ಸರಣಿಯೋಪಾದಿಯಲ್ಲಿ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆ ಮೂಲಕ ನಾಗರಿಕರ ಜಾಗ್ರತೆ ಮತ್ತು ಪೊಲೀಸರ ಗಸ್ತು ವ್ಯವಸ್ಥೆಗೆ ಸವಾಲೆಸೆದಿದ್ದಾರೆ. ವಿದ್ಯಾರಣ್ಯಪುರಂ, ನಜರ್‍ಬಾದ್, ಎನ್‍ಆರ್ ಹಾಗೂ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿ ಸರ ಅಪಹರಣಕಾರರ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ವಿದ್ಯಾರಣ್ಯಪುರಂನಲ್ಲಿ ಸರಗಳವು ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸಿಸಿ ಟಿವಿ ಕ್ಯಾಮರಾದಲ್ಲಿ ಖದೀಮರ ಕೈಚಳಕ ಸೆರೆ
ಮೈಸೂರು: ಬೆಳ್ಳಂಬೆಳಿಗ್ಗೆ ಮೈಸೂರಲ್ಲಿ 5 ಕಡೆ ವೃದ್ಧೆಯರ ಸರ ಎಗರಿಸಿರುವ ಬೈಕ್ ಸವಾರರ ಕೈಚಳಕದ ದೃಶ್ಯಾವಳಿಗಳು ಕೆಲವೆಡೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಕೆಂಪು ಪೆಟ್ರೋಲ್ ಟ್ಯಾಂಕ್ ಹೊಂದಿರುವ ಕಪ್ಪು ಬಣ್ಣದ ಬೈಕ್‍ನಲ್ಲಿ ಕೃತ್ಯ ನಡೆಸಿದ್ದು, ಆ ಬೈಕ್ ಕರೀಷ್ಮಾ ಝಡ್‍ಎಂಆರ್ ಅಥವಾ ಬಜಾಜ್ ಪಲ್ಸರ್ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ತಲೆಗೆ ಹೆಲ್ಮೆಟ್ ಧರಿಸಿರುವ ಇಬ್ಬರು ಬೈಕ್ ಸವಾರರು, ವೃದ್ಧೆಯರ ಸರ ಅಪಹರಿಸುತ್ತಿರುವ ದೃಶ್ಯ ಕಾರ್ಯಾಚರಣೆಯಿಂದ ವೃದ್ಧೆ ಕೆಳಕ್ಕೆ ಬಿದ್ದ ದೃಶ್ಯಗಳೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ಬೈಕ್ ಓಡಾಡಿರುವ ರಸ್ತೆಯ ಇನ್ನಿತರ ಸಿಸಿ ಕ್ಯಾಮರಾಗಳ ಫುಟೇಜ್‍ಗಳನ್ನು ಕಲೆ ಹಾಕಿರುವ ಪೊಲೀಸರು ಲಭ್ಯವಾದ ಸುಳಿ ವಿನ ಜಾಡು ಹಿಡಿದು ಸರ ಅಪಹರಣಕಾರರ ಪತ್ತೆಗೆ ತನಿಖಾ ತಂಡಗಳನ್ನು ರಚಿಸಿ, ಕಾರ್ಯಾ ಚರಣೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ರಿಂಗ್ ರಸ್ತೆ, ವಿಶಾಲ ರಸ್ತೆ ಸಂಪರ್ಕವಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿರುವ ಚಾಲಾಕಿ ಖದೀಮರು, ತಾವು ಪ್ಲಾನ್ ಮಾಡಿದಂತೆ ಸರ ಕಿತ್ತುಕೊಂಡು ಸಂಪರ್ಕ ರಸ್ತೆ ಮೂಲಕವೇ ಸರಾಗವಾಗಿ ಬೇರೆ ಏರಿಯಾ ತಲುಪಿ ಸರಣಿ ಸರ ಅಪಹರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.