ಎರಡೂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸೋಲು ಖಚಿತ

ಯಳಂದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರನ ವಿಶ್ವಾಸ ಕಳೆದುಕೊಂಡು ಸೋಲಿನ ಭೀತಿಯಿಂದ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಎರಡು ಕ್ಷೇತ್ರದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುವುದು ಖಚಿತವಾಗಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್‍ಸಿಂಹ ಹೇಳೀದರು.

ಅವರು ಸಂತೆಮರಹಳ್ಳಿಗೆ ಮೇ 1 ರಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಚುನಾವಣೆ ಪ್ರಚಾರಕ್ಕೆ ಬರುವುದರಿಂದ ಸಮಾರಂಭ ನಡೆಯುವ ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಕಾಂಗ್ರೆಸ್‍ನ ದುರಾಡಳಿತ ಮತ್ತು ಮುಖ್ಯಮಂತ್ರಿಗಳ ವರ್ತನೆ ಅವರ ಸೋಲಿಗೆ ಕಾರಣವಾಗಿದೆ. ಅದಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ: ಚಾಮರಾಜನಗರ ಮತ್ತು ಮೈಸೂರು ಪ್ರಾಂತ್ಯದಲ್ಲಿ 20 ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಸಿದ್ದವಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ತಿಳಿಸಿದರು.
ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಮುಖಂಡ ನೂರೊಂದುಶೆಟ್ಟಿ, ಮೈ.ರವಿಶಂಕರ್, ಕಾರ್ಯದರ್ಶಿ ಟೌನ್ ಮಹೇಶ್, ಅಗರ ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಮದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮದ್ದೂರು ಪುರುಷೋತ್ತಮ್, ವೀರೇಶ್, ಗಣ ಗನೂರು ರಮೇಶ, ಮೈಸೂರು ಶ್ರೀನಿವಾಸ್, ಎಸ್ಟಿ ಮೋರ್ಚ ಅಧ್ಯಕ್ಷ ಜಯಣ್ಣ, ಅಂಬಳೆ ಮಾದನಾಯಕ, ಇತರರು ಹಾಜರಿದ್ದರು.