ಸಿಎಂ ಬೊಮ್ಮಾಯಿ ದೆಹಲಿ ಭೇಟಿ: ಮತ್ತೆ ಸಚಿವಾಕಾಂಕ್ಷಿಗಳಲ್ಲಿ ಕುರ್ಚಿ ಕನಸು

ಬೆಂಗಳೂರು, ಏ. ೨೯- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ರಾತ್ರಿ ದೆಹಲಿಗೆ ತೆರಳಿದ್ದು, ಸಚಿವಾ ಕಾಂಕ್ಷಿಗಳಲ್ಲಿ ಮತ್ತೆ ಸಂಪುಟ ಸೇರುವ ನಿರೀಕ್ಷೆ ಗರಿಗೆದರಿದೆ.

ಏ.೩೦ ರಂದು ದೆಹಲಿಯಲ್ಲಿ ನಡೆಯಲಿರುವ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಇದರ ನಡುವೆಯೇ ಪಕ್ಷದ ಹೈಕ ಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ವೇಳೆ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚಿಸುವ ನಿರೀಕ್ಷೆ ಯಲ್ಲಿ ಸಚಿವಾಕಾಂಕ್ಷಿಗಳಿದ್ದಾರೆ. ಈ ಮಧ್ಯೆ, ಸಿಎಂ ಬೊಮ್ಮಾಯಿ, ಪಕ್ಷದ ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿಲ್ಲ ಎಂದು ಹೇಳಿರುವುದು ಸಂಪುಟ
ಪುನಾರಚನೆ ಆಗುತ್ತದೆಯೇ ಅಥವಾ ಇಲ್ಲವೋ ಎನ್ನುವ ಆತಂಕವೂ ಸಚಿವಾಕಾಂಕ್ಷಿಗಳಲ್ಲಿ ಇದೆ. ಬಿಜೆಪಿ ಮೂಲಗಳ ಪ್ರಕಾರ, ಮೇ ಮೊದಲ ವಾರದಲ್ಲಿ ಸಚಿವ ಸಂಪುಟ ಪುನಾರಚನೆ ಯಾಗುವ ಸಾಧ್ಯತೆ ಇದ್ದು, ಖಾಲಿ ಇರುವ ಐದು ಸ್ಥಾನಗಳ ಜೊತೆಗೆ ನಾಲ್ಕರಿಂದ ಐದು ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೆಲವು ಸಚಿವರನ್ನು ಸಂಪುಟದಿAದ ಕೈಬಿಟ್ಟು ಇತರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲೂ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಪ್ರವಾಸವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.