ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ: ಮಾಜಿ ಸಚಿವ ಎಂ.ಶಿವಣ್ಣ ಆರೋಪ

ಮೈಸೂರು: ಅಧಿಕಾರಕ್ಕೆ ಬಂದು 10 ದಿನಗಳಾದರೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಕುರಿತಂತೆ ಕೇವಲ ಗೊಂದಲದ ಹೇಳಿಕೆಗಳನ್ನು ನೀಡುತ್ತಾ, ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ. ಇದು ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಮಾಜಿ ಸಚಿವ, ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಇಂದಿಲ್ಲಿ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಪದೇ ಪದೆ ಹೇಳುತ್ತಾ ಬಂದ ಕುಮಾರಸ್ವಾಮಿ ಅವರಿಗೆ ಚುನಾವಣಾ ಪೂರ್ವದಲ್ಲಿ ಇದ್ದ ಸಾಲ ಮನ್ನಾ ಮಾಡುವ ಧೈರ್ಯ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಈಗ ಮೈತ್ರಿ ಸರ್ಕಾರದ ನೆಪವೊಡ್ಡಿ ಸಾಲಮನ್ನಾದಿಂದ ದೂರ ಉಳಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳು, ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ವಿಷಯದಲ್ಲಿ ದಾಖಲಾತಿ ನೆಪದಲ್ಲಿ ಅಧಿಕಾರಿಗಳ ಮೂಲಕ ರೈತರಿಗೆ ತೊಂದರೆ ನೀಡಿ ಅವರೇ ಸಾಲ ಮನ್ನಾ ಬಗ್ಗೆ ದೂರ ಉಳಿಯುವಂತೆ ಮಾಡುವುದೇ ಅವರ ಉದ್ದೇಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಕುಮಾರಸ್ವಾಮಿ ಅವರು ಕೂಡಲೇ ರೈತರ ಸಾಲ ಮನ್ನಾ ಘೋಷಣೆ ಮಾಡುವ ಮೂಲಕ ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿದರು. ರೈತ ಮೋರ್ಚಾ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಬಿಜೆಪಿಯ ಮಂUಳಾ ಸೋಮಶೇಖರ್, ಬಾಲಕೃಷ್ಣ, ಮಹದೇವ, ಬೋರೇಗೌಡ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.