ವಿದ್ಯಾರ್ಥಿನಿಲಯಗಳ ಕಟ್ಟಡ ಶೀಘ್ರ ಪೂರ್ಣಗೊಳಿಸಿ, ದೇಗುಲಗಳ ಆಸ್ತಿ ರಕ್ಷಿಸಿ

ಚಾಮರಾಜನಗರ, ಜು.16-ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದ ಕೈಗೊಂಡಿರುವ ವಿದ್ಯಾರ್ಥಿ ನಿಲಯಗಳ ಕಟ್ಟಡ ಹಾಗೂ ಸಮು ದಾಯ ಭವನಗಳನ್ನು ಶೀಘ್ರ ಪೂರ್ಣ ಗೊಳಿಸುವಂತೆ ಹಾಗೂ ದೇವಾಲಯಗಳ ಆಸ್ತಿ ಸಂರಕ್ಷಿಸುವಂತೆ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಇಂದು ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮ ದಾಯ ದತ್ತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಲಾಖೆ ಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿನಿಲಯ ಗಳ ಕಟ್ಟಡ ಕಾಮಗಾರಿ ಕುರಿತು ಪ್ರಗತಿ ಪರಿಶೀಲಿಸಿದ ಸಚಿವರು, ಈಗಾಗಲೇ ಸಾಕಷ್ಟು ಕಡೆ ನಿರ್ಮಾಣ ಕೆಲಸ ಆರಂಭಿಸ ಲಾಗಿದೆ. ಆದರೂ ಇನ್ನೂ ಕೆಲವೆಡೆ ಅಪೂರ್ಣ ವಾಗಿದೆ. ಡಿಸೆಂಬರ್ ಅಂತ್ಯ ದೊಳಗೆ ಕಾಮಗಾರಿ ಪೂರ್ಣಗೊಳಿಸಿ. ಸಮು ದಾಯ ಭವನಗಳ ಕೆಲಸಗಳನ್ನು ಚುರುಕು ಗೊಳಿಸಿ ಎಂದು ತಾಕೀತು ಮಾಡಿದರು.

ಇದೇ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎನ್.ಮಹೇಶ್ ಮಾತ ನಾಡಿ, ಹಾಸ್ಟಲ್‍ಗಳು-ಸಮುದಾಯ ಭವನಗಳ ಕಾಮಗಾರಿಗೆ ಯಾವುದೇ ತೊಡಕುಗಳಿದ್ದರೂ ಶೀಘ್ರವಾಗಿ ಪರಿಹರಿಸಿಕೊಳ್ಳಬೇಕು ಎಂದರು.

ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಸಚಿವರು, ಧಾರ್ಮಿಕ ಪರಿಷತ್ ಸಭೆಯನ್ನು ತಿಂಗಳಿಗೊಮ್ಮೆ ಕಡ್ಡಾಯ ವಾಗಿ ನಡೆಸಬೇಕು. ಇಲಾಖೆ ವ್ಯಾಪ್ತ್ತಿಯ ದೇವಾಲಯಗಳ ಆಸ್ತಿ ಸಂರಕ್ಷಣೆ ಯಾಗಬೇಕು. ಇದಕ್ಕಾಗಿ ಸರ್ವೆ ನಡೆಸ ಬೇಕು ಎಂದು ಸೂಚಿಸಿದಲ್ಲದೆ, ಜಿಲ್ಲೆಯ ದೇವಾಲಯಗಳ ಮಾಹಿತಿ, ಮಲೆಮಹ ದೇಶ್ವರ ಬೆಟ್ಟದಲ್ಲಿ ನಡೆದಿರುವ ಕಾಮಗಾರಿ ಗಳ ಸಂಪೂರ್ಣ ವಿವರ ಪಡೆದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ, ಬೆಟ್ಟದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಗಳನ್ನು ವಿವರಿಸಿದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತ ಮೂರ್ತಿ ಕುಲಗಾಣ, ಅಪರ ಜಿಲ್ಲಾಧಿ ಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಸುಂದರರಾಜು, ತಹಸೀಲ್ದಾರ್ ಚಿದಾ ನಂದ ಗುರುಸ್ವಾಮಿ, ರವಿಶಂಕರ್, ಜಯ ಪ್ರಕಾಶ್, ಕೆ.ಕುನಾಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಧಾರ್ಮಿಕ ಪರಿಷತ್ ಸದಸ್ಯರು, ವಿವಿಧ ದೇವಾಲಯಗಳ ಸಮಿತಿ ಸದಸ್ಯರು, ಇತರರು ಸಭೆಯಲ್ಲಿದ್ದರು. ಸಭೆಗೂ ಮೊದಲು ಸಚಿವರು ನಗರದ ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.