ಆತ್ಮವಿಶ್ವಾಸ, ಸ್ವಪ್ರಯತ್ನ ಯಶಸ್ಸಿನ ಗುಟ್ಟು ನಿವೃತ್ತ ಬ್ಯಾಂಕ್ ಅಧಿಕಾರಿ ಪ್ರದ್ಯುಮ್ನ ಕಿವಿಮಾತು

ಮೈಸೂರು, ಫೆ.28- ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ಯಶಸ್ಸಿನ ಗುಟ್ಟು ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‍ನ ನಿವೃತ್ತ ಮುಖ್ಯ ವ್ಯವಸ್ಥಾಪಕ, ವ್ಯಕ್ತಿತ್ವ ವಿಕಸನ ತರಬೇತುದಾರ ಕೆ.ಪಿ.ಪ್ರದ್ಯುಮ್ನ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೈಸೂರಿನ ಶಾರದಾವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ `ಭಯ ಬಿಡಿ ಪರೀಕ್ಷೆ ಎನ್ನುವುದು ಹಬ್ಬವಾಗಲಿ’ ವಿಶೇಷ ಉಪನ್ಯಾಸ ಕಾರ್ಯಗಾರದಲ್ಲಿ ಮಾತ ನಾಡಿದ ಅವರು, ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವುದಷ್ಟೇ ಗುರಿಯಾಗಿರಬಾರದು. ಜ್ಞಾನವೃದ್ಧಿ ಹಾಗೂ ಮನಃ ಸಂತೋಷಕ್ಕಾಗಿ ವಿದ್ಯಾರ್ಜನೆ ಮಾಡಬೇಕು ಎಂದರು.

ನಮ್ಮ ಬಗ್ಗೆ ನಮಗೇ ಕೀಳಿರಿಮೆ ಇರಬಾರದು. ಕುತೂಹಲ, ಆಲೋಚನಾ ಶಕ್ತಿಯೊಂ ದಿಗೆ ಇಷ್ಟಪಟ್ಟು ಓದಿ, ಸಾಧಿಸುವ ಛಲ ಇರಬೇಕು. ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ದಿಂದ ಯಶಸ್ಸು ಸಾಧ್ಯ. ಪರೀಕ್ಷೆಗಳ ಬಗ್ಗೆ ಅನಗತ್ಯ ಭಯ, ಒತ್ತಡಕ್ಕೆ ಒಳಗಾಗದೆ ಹಬ್ಬದಂತೆ ಸಂಭ್ರಮದಿಂದ ಸಿದ್ಧತೆ ಮಾಡಿಕೊಳ್ಳಬೇಕು. ದೃಢಸಂಕಲ್ಪದೊಂದಿಗೆ ಗುರಿ ಸಾಧನೆಗೆ ಮುಂದಾಗಬೇಕು ಎಂದು ಅವರು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಶಾರದಾವಿಲಾಸ ಸಂಸ್ಥೆಯ ಗೌರವ ಕಾರ್ಯದರ್ಶಿ ಸಿ.ಎನ್.ಚಂದ್ರಶೇಖರ್ ಮಾತನಾಡಿ, ಪರೀಕ್ಷೆ ಹಾಗೂ ಫಲಿತಾಂಶಕ್ಕೆ ಹೆದರಿ ಎಷ್ಟೋ ವಿದ್ಯಾರ್ಥಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಕೆಟ್ಟ ನಿರ್ಧಾರಕ್ಕೆ ಮುನ್ನ ಒಂದು ಕ್ಷಣ ಯೋಚಿಸಿ, ಛಲದಿಂದ ಬದುಕಿನ ಹಾದಿ ಹಿಡಿಯಬೇಕು ಎಂದು ಹೇಳಿದರು.
ಶಾರದಾವಿಲಾಸ ಪಪೂ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಕುಮಾರಿ ಕಾವ್ಯಶ್ರೀ ರಾವ್ ಮತ್ತಿತರರು ಉಪಸ್ಥಿತರಿದ್ದರು.