ಆಪರೇಷನ್ ಕಮಲ ಎಸಿಬಿಗೆ ಕಾಂಗ್ರೆಸ್ ದೂರು

ಬೆಂಗಳೂರು: ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕ ರನ್ನು ಸೆಳೆದು ಮೈತ್ರಿ ಸರ್ಕಾರ ಪತನ ಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಪ್ರತಿ ಯಾಗಿ ಕಾಂಗ್ರೆಸ್ ಎಸಿಬಿ ಅಸ್ತ್ರಕ್ಕೆ ಮೊರೆ ಹೋಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಇಂದು ಈ ಸಂಬಂಧ ಎಸಿಬಿಗೆ ದೂರು ಸಲ್ಲಿಸಿ ದ್ದಾರೆ. ಕಾಂಗ್ರೆಸ್‍ನ 12 ಶಾಸಕರಿಗೆ ಬಿಜೆಪಿ 20ರಿಂದ 30 ಕೋಟಿ ಹಣದ ಆಮಿಷ ಒಡ್ಡಿದೆ ಎಂದು ಸುದ್ದಿವಾಹಿನಿಗಳಲ್ಲಿ ಬಿತ್ತರವಾದ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ವಿರುದ್ಧ ಈ ದೂರನ್ನು ಸಲ್ಲಿಸಲಾಗಿದೆ.

ಎಸಿಬಿಗೆ ಈಶ್ವರ ಖಂಡ್ರೆ ದೂರು ಸಲ್ಲಿಸುವ ಮುನ್ನ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಕಾಂಗ್ರೆಸ್‍ನ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುತ್ತಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು. ಶಿವಕುಮಾರ್ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು ನಮ್ಮ ಶಾಸಕರಿಗೆ ಬಿಜೆಪಿ ಆಮಿಷವೊಡ್ಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿವೆ. ಶಾಸಕರೂ ಸಹ ನಮಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಹಣದ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದರು. ಉಪ ಮುಖ್ಯಮಂತ್ರಿಗಳ ಹೇಳಿಕೆಯ ನಂತರ ಈಶ್ವರ ಖಂಡ್ರೆ ಅವರು ಕೆಲ ಶಾಸಕರೊಂದಿಗೆ ಎಸಿಬಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.