ಕಾಂಗ್ರೆಸ್, ಜೆಡಿಎಸ್‍ನದ್ದು `ಕುಟುಂಬ ಮೊದಲು ನಂತರ ರಾಷ್ಟ್ರ’ ಸಿದ್ಧಾಂತ

ಮೈಸೂರು, ಮಾ.5(ಎಸ್‍ಬಿಡಿ)- ಸೈದ್ಧಾ ಂತಿಕವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ಆಗಿದ್ದು, ಹೊರನೋಟಕಷ್ಟೇ ಭಿನ್ನತೆ ಪ್ರದರ್ಶಿಸುತ್ತಿವೆ ಎಂದು ರಾಜ್ಯ ಬಿಜೆಪಿ ಚುನಾ ವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದರು.

ಬಿಜೆಪಿ `ವಿಜಯ ಸಂಕಲ್ಪ ಯಾತ್ರೆ’ ಮೈಸೂರಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಆಯೋಜಿಸಿದ್ದ ಚಾಮರಾಜ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ತ್ರಿಪುರಾದಲ್ಲಿ ಸಿದ್ಧಾಂತ, ನಾಯಕತ್ವ ಭಿನ್ನವಿರುವ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿ ಬಿಜೆಪಿ ವಿರುದ್ಧ ಚುನಾವಣೆ ನಡೆಸಿ ದರೂ ಶೇ.50 ಸ್ಥಾನ ಪಡೆಯಿತು. ಈ ರೀತಿ ಕರ್ನಾಟಕದಲ್ಲೂ ಎರಡು ಪಕ್ಷಗಳಿವೆ. ಮೇಲ್ನೋಟಕ್ಕೆ ಮಾತ್ರ ಜಗಳ ಆಡುತ್ತಾರೆ. ಆದರೆ ಈ ಎರಡೂ ಪಕ್ಷಗಳಲ್ಲೂ `ಕುಟುಂಬ ಮೊದಲು ರಾಷ್ಟ್ರ ನಂತರ’ ಸಿದ್ಧಾಂತವಿದೆ. ಮೊದಲು ತಮ್ಮ ಪರಿವಾರದವರಿಗೆ ಟಿಕೆಟ್ ನೀಡಿ, ಉಳಿದಿದ್ದನ್ನು ಸಾಲಿನಲ್ಲಿರುವವರಿಗೆ ನೀಡುತ್ತಾರೆ. ಆದರೆ ಬಿಜೆಪಿಯಲ್ಲಿ ಕಾರ್ಯ ಕರ್ತರನ್ನು ಹುಡುಕಿ, ಜನರ ಪ್ರತಿಬಿಂಬ ವಾಗಿಸುವ ಸಂಸ್ಕøತಿ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರವಿದ್ದಾಗ ಎ.ಕೆ.ಆಂಟನಿ ಯವರು ದೇಶದ ಗಡಿಯಲ್ಲಿ ಅಭಿವೃದ್ಧಿ ಯಾದರೆ ಕ್ಷೇಮವಲ್ಲ, ಆ ಕಾರ್ಯವನ್ನೂ ನಾವು ಮಾಡಲಾರೆವು ಎಂದಿದ್ದರು. ಪರಿಣಾಮ ಅರುಣಾಚಲಪ್ರದೇಶ ಗಡಿಯಲ್ಲಿ 1 ಲಕ್ಷ ಹಾಗೂ ಲಡಾಕ್ ಭಾಗದಲ್ಲಿ 50 ಸಾವಿರ ಎಕರೆ ಜಾಗ ಚೀನಾ ಆಕ್ರಮಿಸಿ ಕೊಂಡಿತು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಚೀನಾ ಹಾಗೂ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಗಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ದೇಶಕ್ಕೆ ಓರ್ವ ಉತ್ತಮ, ಸಮರ್ಥ ನಾಯಕ ಸಿಕ್ಕರೆ ಏನೆಲ್ಲಾ ಸುಧಾರಣೆ ಸಾಧ್ಯ ಎನ್ನು ವುದಕ್ಕೆ ಮೋದಿ ಉದಾಹರಣೆಯಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ ನಂತರದ 9 ತಿಂಗಳಲ್ಲಿ ತೆಲಂಗಾಣ, ಎರಡೂ ವರೆ ವರ್ಷ ನಂತರ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ದೇಶದೆಲ್ಲೆಡೆ ಕಾಂಗ್ರೆಸ್ ಮುಕ್ತ ಭಾರತ ಎಂದು ಜನ ನಿರ್ಧರಿಸಿದ್ದಾರೆ. 1948ರಲ್ಲಿ ಮಹಾತ್ಮ ಗಾಂಧಿ ಅವರೇ ಕಾಂಗ್ರೆಸ್ ಬೇಡ ಎಂದಿದ್ದರು. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ಯೋಚಿಸಿ ಮತದಾನ ಮಾಡಿದರೆ ಗಾಂಧೀಜಿ ಕನಸು ನನಸಾಗುತ್ತದೆ. ಅಧಿಕಾರ ಹಿಡಿಯುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ. ಬಿಜೆಪಿ ಸರ್ಕಾರ, ನಿಮ್ಮ ಪ್ರತಿನಿಧಿಗಳ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಚಿಂತನೆ ಮಾಡಿ ಬೆಂಬಲಿಸುತ್ತೀರೆಂಬ ವಿಶ್ವಾಸವಿದೆ ಎಂದರು.

ಅಂಕಿಅಂಶವೇ ಇರಲಿಲ್ಲ: ಸ್ವಾತಂತ್ರ್ಯ ನಂತರ ಭಾರತದಲ್ಲಿ 2014ರವರೆಗೆ ಅಧಿಕಾರ ನಡೆಸಿದ ಸರ್ಕಾರಗಳು ಜನರ ದೃಷ್ಟಿಯಲ್ಲಿ ಯೋಚಿಸಿ ಕೆಲಸ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಒಂದು ಕುಟುಂಬದ ಉನ್ನತಿ ಹಾಗೂ ನಿರ್ದಿಷ್ಟ ಮತ ಬ್ಯಾಂಕ್‍ಗೆ ಮಾತ್ರ ಅಭಿವೃದ್ಧಿ ಕಾರ್ಯಕ್ರಮ ನೀಡುತ್ತಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 9 ವರ್ಷದಲ್ಲಿ 135 ಕೋಟಿ ಜನರಿಗೆ ಅಭಿವೃದ್ಧಿ ಕಾರ್ಯಕ್ರಮ ತಲುಪಿಸಿದೆ. 2014ರವರೆಗೆ ಅಭಿವೃದ್ಧಿಶೀಲ ರಾಜಕೀಯಕ್ಕೆ ಬದಲಾಗಿ ಧರ್ಮ, ಜಾತಿ ಹೆಸರಲ್ಲಿ ಒಂದು ಮತಬ್ಯಾಂಕ್ ಸೃಷ್ಟಿಸಿ ಕೊಂಡು ರಾಜಕೀಯ ಮಾಡಿಕೊಂಡು ಬರಲಾಗಿತ್ತು. ಅದನ್ನು ಮೋದಿ ಅವರು ಒಡೆದು ಹಾಕಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸುಳ್ಳು ಭರವಸೆ: ತಮಿಳು ನಾಡಿನಲ್ಲಿ 24 ತಿಂಗಳ ಹಿಂದೆ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿಯಾಗಿ ರೇಷನ್ ಕಾರ್ಡ್ ಹೊಂದಿರುವ ಮಹಿಳೆಗೆ ಮಾಸಿಕ 1 ಸಾವಿರ ನೀಡುವುದಾಗಿ ಭರವಸೆ ನೀಡಿ ದ್ದರು. ಆದರೆ ಈವರೆಗೆ 1 ಪೈಸೆ ನೀಡಿಲ್ಲ. ಅಲ್ಲಿ 3 ಕೋಟಿ ರೇಷನ್ ಕಾರ್ಡ್ ಇದ್ದು, ತಿಂಗಳಿಗೆ 3 ಸಾವಿರ ಕೋಟಿ ರೂ. ಬೇಕಾಗುತ್ತದೆ. ಇದೀಗ ಕರ್ನಾಟಕದಕ್ಕೂ ಕಾಂಗ್ರೆಸ್‍ನವರು ತಮ್ಮ ಸುಳ್ಳು ಭರವಸೆ ನಂಬಿ ಜನ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಇಲ್ಲಿ ರೇಷನ್ ಕಾರ್ಡ್ ಇರುವ ಮನೆ ಮುಖ್ಯಸ್ಥೆಗೆ 2 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ ತಿಂಗಳಿಗೆ 4 ಸಾವಿರ ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಎಲ್ಲಿಂದ ತರುತ್ತಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಮನೆಯಲ್ಲಿ ನೋಟ್ ಪ್ರಿಂಟಿಂಗ್ ಮಿಷನ್ ಇಟ್ಟುಕೊಂಡಿದ್ದಾರಾ. ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಓಪಿಎಸ್ ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಅದಕ್ಕೆ ಬಂಡವಾಳ ಹೊಂದಿಸಲು ಪ್ರತಿ ಲೀಟರ್ ಡೀಸೆಲ್‍ಗೆ 3 ರೂ. ಸೆಸ್ ಹಾಕು ತ್ತಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರೂ ರೇಷನ್ ಕಾರ್ಡ್ ಇರುವ ಮಹಿಳೆಗೆ 15 ಸಾವಿರ ನೀಡುವುದಾಗಿ ಘೋಷಿಸಿ, ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ 10 ರೂ. ಹೆಚ್ಚಿಸಿ ಸರಿದೂಗಿಸಬಹುದಲ್ಲವೇ. ಆದರೆ ಈ ರೀತಿಯ ಭರವಸೆಗಳನ್ನು ಜನ ನಂಬುವುದಿಲ್ಲ ಎಂದರು.

ಜನ ನಿರ್ಧರಿಸಿದ್ದಾರೆ: ಅಭಿವೃದ್ಧಿಶೀಲ ಆಡಳಿತದ ಕಾರಣದಿಂದಲೇ ಭಾರತದಲ್ಲಿ ನಿರಂತರವಾಗಿ ಬಿಜೆಪಿ ಗೆಲ್ಲುತ್ತಿದೆ. ಕೊರೊನಾ ಉತ್ತುಂಗದಲ್ಲಿದಾಗ ಬಿಹಾರ ಚುನಾವಣೆ ಯಲ್ಲಿ ಬಿಜೆಪಿಗೆ ಬೆಂಬಲ ನೀಡಿದರು. ನಂತರ ಗೋವಾ, ಉತ್ತರಾಖಂಡ, ತ್ರಿಪುರಾ, ಮಣಿಪುರ, ಉತ್ತರ ಪ್ರದೇಶ ಹೀಗೆ ಎಲ್ಲಾ ಕಡೆ ಬಿಜೆಪಿ ಸರ್ಕಾರ ಬಂದಿದೆ. ಕರ್ನಾಟಕದಲ್ಲಿ 2 ವರ್ಷ ಯಡಿಯೂರಪ್ಪನವರು, 1 ವರ್ಷ 215 ದಿನಗಳಿಂದ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡಿದ್ದಾರೆ. 3 ವರ್ಷದಲ್ಲಿ ಕರ್ನಾಟಕದಲ್ಲಿರುವ ಎಲ್ಲಾ ಮನೆಗೆ ಅಭಿವೃದ್ಧಿ ತಲುಪಿವೆ ಎಂದು ಹೇಳಿದರು. ಕೊರೊನಾ ನಂತರ ದೊಡ್ಡ ರಾಜ್ಯ ಕರ್ನಾಟದಲ್ಲಿ ಚುನಾವಣೆ ಬಂದಿದೆ. ಇಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಅಚಲ ವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಣ್ಣಿಸಿದ ಅಣ್ಣಾಮಲೈ: ಕೆ.ಎಸ್.ಈಶ್ವರಪ್ಪನವರು ಸೈದ್ಧಾಂತಿಕ ವ್ಯಕ್ತಿ. ದಕ್ಷಿಣ ಭಾರತದಲ್ಲಿ ಬಿಜೆಪಿ ಇಷ್ಟೊಂದು ಗಟ್ಟಿಯಾಗಿರಲು ಇವರೂ ಪ್ರಮುಖ ಕಾರಣಕರ್ತರು. ಪ್ರತಾಪ್ ಸಿಂಹ ಅಭಿವೃದ್ಧಿಶೀಲ ಸಂಸದ. ಅದಕ್ಕೆ ಸಾಕ್ಷಿಯಾಗಿರುವ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಹೆದ್ದಾರಿಯನ್ನು ಮಾ.12ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. ಹಿರಿಯರಾದ ಶಾಸಕ ರಾಮದಾಸ್ ಅವರು ಮೈಸೂರು ಅಭಿ ವೃದ್ಧಿಗೆ ಚಾಲನೆ ಕೊಟ್ಟಿರುವ ಪ್ರಮುಖ ನಾಯಕರು. ನಾಗೇಂದ್ರ ಅವರನ್ನು ಮೊದಲ ಭೇಟಿಯಾಗಿದ್ದು, ಇವರು ಅಭಿವೃದ್ಧಿಶೀಲ ಶಾಸಕರೆನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ, ಶಾಸಕರಾದ ಎಸ್.ಎ.ರಾಮದಾಸ್, ಪ್ರತಾಪ್ ಸಿಂಹ, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪ, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು, ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ಮುಖಂಡ ರಾದ ಗಿರಿಧರ್, ಹಿರೇಂದ್ರ ಶಾ, ದತ್ತಾತ್ರಿ, ಬಿ.ಪಿ.ಮಂಜುನಾಥ್, ಹೇಮಂತ್ ಕುಮಾರ್ ಗೌಡ, ದೇವರಾಜ್, ಕಿರಣ್ ಗೌಡ, ಮ.ವಿ.ರಾಂಪ್ರಸಾದ್, ಸೋಮ ಸುಂದರ್, ಜಯಪ್ರಕಾಶ್ ಮತ್ತಿತರರಿದ್ದರು.