ಮುಖ್ಯಮಂತ್ರಿ ವಸತಿ ಯೋಜನೆಯಡಿ ರಾಜ್ಯಾದ್ಯಂತ ಲಕ್ಷ ಮನೆ ನಿರ್ಮಾಣ

ಬೆಂಗಳೂರು: ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವಸತಿ ಸಚಿವ ಯು.ಟಿ.ಖಾದರ್, ಪುರಸಭೆಗಳ ವ್ಯಾಪ್ತಿಯಲ್ಲಿ 60,000 ಹಾಗೂ ಬೆಂಗಳೂರು ನಗರದಲ್ಲಿ 45,000 ಮನೆಗಳನ್ನು ನಿರ್ಮಿಸಲಾಗುವುದು ಎಂದರು.

ಯೋಜನೆಗೆ ಈ ತಿಂಗಳ 12 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. 60,000 ಮನೆಗಳ ಪೈಕಿ ಉತ್ತರ ಕರ್ನಾಟಕಕ್ಕೆ 22,000 ಮನೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಮನೆಗಳ ನಿರ್ಮಾಣ 9 ತಿಂಗಳಲ್ಲಿ ಪೂರ್ಣಗೊಳಿಸಿ ವಸತಿ ನಿಗಮಕ್ಕೆ ಹಸ್ತಾಂತರಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದ್ದು, 60,000 ವಸತಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈ ಯೋಜನೆಯಡಿ ಪರಿಶಿಷ್ಟರಿಗೆ ಮಂಜೂರಾಗುವ ಮನೆಗಳಿಗೆ ಕೇಂದ್ರ ಸರ್ಕಾರ ಶೇಕಡಾ 33ರಷ್ಟು ಪಾಲು ನೀಡಲಿದೆ, ಶೇಕಡಾ 40ರಷ್ಟು ಪಾಲನ್ನು ರಾಜ್ಯ ಸರ್ಕಾರ ಭರಿಸಲಿದೆ, ಉಳಿದ 30ರಷ್ಟು ಹಣವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.

ಸಾಮಾನ್ಯ ವರ್ಗದವರಿಗೆ ಮಂಜೂರಾಗುವ ಮನೆಗಳಿಗೆ ಕೇಂದ್ರ ಸರ್ಕಾರ ಶೇಕಡಾ 30ರಷ್ಟು, ರಾಜ್ಯ ಸರ್ಕಾರ ಶೇಕಡಾ 20ರಷ್ಟು ಹಣವನ್ನು ನೀಡಲಿದ್ದು, ಉಳಿದ ಶೇಕಡಾ 50ರಷ್ಟು ಹಣವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ ಎಂದರು. ಈ ಹಿಂದೆ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಫಲಾನುಭವಿಗಳಿಂದ ಅರ್ಜಿಗಳನ್ನೂ ಆಹ್ವಾನಿಸಲಾಗಿತ್ತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಆದರೆ ಒಂದು ಲಕ್ಷ ಮನೆಗಳಿಗೆ ಅರ್ಜಿ ಆಹ್ವಾನಿಸಿದರೆ 45,000 ಅರ್ಜಿಗಳು ಬಂದಿವೆ, ಈ ಎಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ಎಕರೆ ಭೂಮಿ ಗುರುತಿಸಲಾಗಿದೆ, 2 ಕೊಠಡಿಯ ಮನೆಗೆ 10ರಿಂದ 12 ಲಕ್ಷ ರೂ. ವೆಚ್ಚವಾಗಲಿದ್ದು, ಸಿಂಗಲ್ ಬೆಡ್ ರೂಮ್ ಮನೆಗೆ ಇನ್ನೂ ಕಡಿಮೆ ಬೆಲೆ ಇರಲಿದೆ ಎಂದರು.