ಎನ್‍ಟಿಎಂ ಶಾಲೆ ಪರ ಮುಂದುವರೆದ ಹೋರಾಟ

ಮೈಸೂರು,ಜೂ.30(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿ ಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ಬುಧ ವಾರವೂ ವಿವಿಧ ಸಂಘಟನೆಗಳ ಮುಖಂ ಡರು ಪ್ರತಿಭಟನೆ ನಡೆಸಿದ್ದು, ಸ್ವಾಮಿ ವಿವೇಕಾನಂದರ ವೇಷಭೂಷಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಗಮನ ಸೆಳೆದರು.

ಶಾಲೆ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಈ ಹಿಂದೆ ಜಿಲ್ಲಾಧಿ ಕಾರಿಗಳು ಶಾಲೆಗೆ ಸೇರಿದ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಹುದು ಎಂದು ವರದಿ ನೀಡಿದ್ದಾರೆ. ಈ ಮಧ್ಯೆ ಶಾಲೆಯ ಕಟ್ಟಡ ತೆರವುಗೊಳಿಸಿ ವಿವೇಕ ಸ್ಮಾರಕ ನಿರ್ಮಿಸಬೇಕೆಂಬ ಸರ್ಕಾರದ 2013ರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿ ದಿದ್ದರೂ, ಸಾರ್ವಜನಿಕರ ಹಿತದೃಷ್ಟಿ ಯಿಂದ ಪುನರ್ ಪರಿಶೀಲಿಸಿ, ಶಾಲೆ ಉಳಿಸಿ ಸ್ಮಾರಕ ನಿರ್ಮಿಸುವಂತೆ ಮರು ಆದೇಶಿಸುವ ಪರಮ ಅಧಿಕಾರ ಸರ್ಕಾರಕ್ಕಿದೆ ಎಂದು ಪ್ರತಿಪಾದಿಸಿದರು.

ವಿವಿಧ ಸಂಘಟನೆಗಳ ಮುಖಂಡ ರಾದ ಕೊ.ಸು.ನರಸಿಂಹಮೂರ್ತಿ, ಕೆ.ಎಸ್. ಶಿವರಾಮು, ಚೋರನಹಳ್ಳಿ ಶಿವಣ್ಣ, ಕಲ್ಲಹಳ್ಳಿ ಕುಮಾರ್, ಆರವಿಂದಶರ್ಮ, ಮೂಗೂರು ನಂಜುಂಡಸ್ವಾಮಿ, ಮಡ್ಡಿಕೆರೆ ಗೋಪಾಲ್, ಉಮಾದೇವಿ, ಭಾನು ಮೋಹನ್, ಉಗ್ರನರಸಿಂಹೇಗೌಡ, ಸೋಸಲೆ ಸಿದ್ದರಾಜು ಮತ್ತಿತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.