ಆನ್‍ಲೈನ್ ಔಷಧ ವ್ಯಾಪಾರ ವಿರೋಧಿಸಿ ಮೈಸೂರಲ್ಲಿ ಔಷಧಿ ಅಂಗಡಿಗಳ ಬಂದ್

ಮೈಸೂರು: ‘ಇ-ಫಾರ್ಮಸೀಸ್’ ಆನ್‍ಲೈನ್ ಮೂಲಕ ಔಷಧ ವ್ಯಾಪಾರ ವಹಿವಾಟು ಖಂಡಿಸಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ವರ್ತಕರು ಇಂದು ಪ್ರತಿಭಟನೆ ನಡೆಸಿದರು.

ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಹಾಗೂ ದಿ ಕರ್ನಾಟಕ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಸುಮಾರು 1000 ಮೆಡಿಕಲ್ ಸ್ಟೋರ್‍ಗಳು ಬಂದ್ ಆಗಿದ್ದವು.

ಮೈಸೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕುಮಾರ್ ಮೆಡಿ ಕಲ್ಸ್‍ನ ಎಸ್.ಕುಮಾರಸ್ವಾಮಿ, ಕಾರ್ಯದರ್ಶಿ ವಿಕ್ಟರಿ ಫಾರ್ಮಾದ ಅಮಾನುಲ್ಲಾ ಖಾನ್ ಹಾಗೂ ಖಜಾಂಚಿ ಚಂದನ್ ಮೆಡಿಕಲ್ಸ್‍ನ ಎಂ.ರಾಜು ನೇತೃತ್ವದಲ್ಲಿ ನೂರಾರು ಔಷಧಿ ವ್ಯಾಪಾರಿಗಳು ಮೈಸೂ ರಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ನ್ಯಾಯಾಲಯದ ಎದುರಿನ ಮಹಾತ್ಮಗಾಂಧಿ ಪುತ್ಥಳಿ ಬಳಿಯಿಂದ ಕೃಷ್ಣರಾಜ ಬುಲೇವಾರ್ಡ್ ರಸ್ತೆ ಮೂಲಕ ಮೆರವಣಿಗೆಯಲ್ಲಿ ಜಿಲ್ಲಾಧಿ ಕಾರಿ ಕಚೇರಿಗೆ ಬಂದು, ಅಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಆನ್‍ಲೈನ್ ಮೂಲಕ ಔಷಧಿ ವ್ಯಾಪಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

`ಆನ್‍ಲೈನ್ ಔಷಧಿ ವಹಿವಾಟು ನಿಲ್ಲಿಸ ಬೇಕು, ರೋಗಿಗಳ ಆರೋಗ್ಯ ಕಾಪಾಡ ಬೇಕು, ಔಷಧಿಗಳ ಕೊರತೆ ನೀಗಿಸಬೇಕು’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ಔಷಧಿ ವ್ಯಾಪಾರಿಗಳು ಮೆರವಣಿಗೆಯಲ್ಲಿ ಕಪ್ಪು ಪಟ್ಟಿ ಧರಿಸಿ ಘೋಷಣಾ ಫಲಕ ಗಳನ್ನು ಪ್ರದರ್ಶಿಸಿದರು.

ಇ-ಫಾರ್ಮ ಸೀಸ್‍ನಲ್ಲಿ ಯಾವುದೇ ವ್ಯಾಪ್ತಿಯ ಪರಿಮಿತಿ ಇರುವುದಿಲ್ಲ. ದೇಶದ ಯಾವುದೇ ಭಾಗಕ್ಕಾದರೂ ಯಾರು ಬೇಕಾದರೂ ಔಷಧಿಗಳನ್ನು ಮಾರಾಟ ಮಾಡಬಹುದಾಗಿರುವುದರಿಂದ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಅಧಿಕೃತ ವ್ಯಾಪಾರಿ, ಸ್ಥಳ ಎಂಬುದಿಲ್ಲವಾದ್ದರಿಂದ ಔಷಧಿಗಳಲ್ಲಿ ದೋಷ ಕಂಡುಬಂದಲ್ಲಿ ಯಾರಿಗೆ ಜವಾಬ್ದಾರಿ ವಹಿಸಬೇಕೆಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಗ್ರಾಹಕರಿಗೆ ಕಳಪೆ ಔಷಧಿ ಪೂರೈಸಿ ವಂಚಿಸಬಹುದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದರು.

ಇ-ಫಾರ್ಮಸೀಸ್ ಜಾರಿಗೆ ಬಂದಾಗಿನಿಂದ ಔಷಧಿ ಅಂಗಡಿಗಳ ವ್ಯಾಪಾರ ಇಳಿಮುಖವಾಗಿದ್ದು, ಅದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಔಷಧಿ ವ್ಯಾಪಾರಿಗಳು ದೂರಿದರು.

ಸಂಘದ ಉಪಾಧ್ಯಕ್ಷ ನರೇಂದ್ರ ಬಾಬು, ಪದಾಧಿಕಾರಿಗಳಾದ ಚಂದ್ರಗುಪ್ತ ಜೈನ್, ಹರೀಶ, ಜಾವಿದ್, ರಾಜು ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆದರೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಮೆಡ್‍ಪ್ಲಸ್, ಜನತಾ ಬಜಾರ್ ಹಾಗೂ ಆಸ್ಪತ್ರೆಗಳಿಗೆ ಹೊಂದಿ ಕೊಂಡಂತಿರುವ ಔಷಧಿ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು. ಹಾಗಾಗಿ ಇಂದಿನ ಮೆಡಿಕಲ್ ಸ್ಟೋರ್ ಬಂದ್‍ನಿಂದ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗಲಿಲ್ಲ.