`ಜನತಾ ಕಫ್ರ್ಯೂ’ಗೆ ಸಹಕರಿಸಿ: ಶಾಸಕ ರಾಮದಾಸ್ ಮನವಿ

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಹರಡುವುದನ್ನು ತಡೆಯುವ ಅಭಿಯಾನದಲ್ಲಿ ದೇಶದ ಜನರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಭಾನುವಾರದ `ಜನತಾ ಕಫ್ರ್ಯೂ’ಗೆ ನಗರದ ವಾಣಿಜ್ಯ ವಲಯ ಬೆಂಬಲ ಸೂಚಿಸಿದೆ. ಜನರೂ ಸಹಕಾರ ನೀಡಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮನುಕುಲಕ್ಕೇ ಅಪಾಯ ತಂದೊಡ್ಡಿರುವ ಕೊರೊನಾ, ದೇಶದಲ್ಲಿ ಈಗಾಗಲೇ ಸಾಕಷ್ಟು ಹಾನಿಯುಂಟು ಮಾಡಿದೆ. ಸದ್ಯದ ಸಂಕಷ್ಟಕರ ಪರಿಸ್ಥಿತಿಯಲ್ಲಿ ದೇಶದ ಜನರೆಲ್ಲರೂ ಸರ್ಕಾರದ ಕ್ರಮದ ಜೊತೆಗೆ ಕೈಜೋಡಿಸುವ ಅಗತ್ಯವಿದೆ ಎಂದರು.

ಪ್ರಧಾನಿ ಮನವಿಗೆ ನಗರದ ಎಲ್ಲ ಹೋಟೆಲ್, ರೆಸ್ಟೋರೆಂಟ್, ಆಟೋ, ಟ್ಯಾಕ್ಸಿ, ಪುಟ್ಟ ಟೀ ಅಂಗಡಿ, ಬೀದಿಬದಿ ವ್ಯಾಪಾರಿಗಳ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ ಮೊದಲಾದವು ಬೆಂಬಲ ಸೂಚಿಸಿವೆ. ಸಾರಿಗೆ ಸಂಸ್ಥೆ ಬಸ್‍ಗಳು ಸಹ ಅಂದು ಸಂಚರಿಸುವುದಿಲ್ಲ. ಎಲ್ಲ ಚಟುವಟಿಕೆ ಸ್ತಬ್ಧವಾದಲ್ಲಿ ಅವುಗಳಿಂದ ಇರುತ್ತಿದ್ದ ಸಾರ್ವಜನಿಕ ಸಂಪರ್ಕ ಪೂರ್ಣ ಕಡಿತವಾಗಲಿದೆ. ಅಗ ಅಲ್ಲಿರಬಹುದಾದ ಎಲ್ಲ ವೈರಸ್‍ಗಳು ತಂತಾನೇ ಸಾವಿಗೀಡಾಗುತ್ತವೆ. ವೈರಸ್ ಅತಿ ದೊಡ್ಡ ಪ್ರಮಾಣದಲ್ಲಿ ಹರಡುವುದೂ ತಪ್ಪುತ್ತದೆ ಎಂದರು.

ಪ್ರಧಾನಿ ಮೋದಿಯವರ `ಜನತಾ ಕಫ್ರ್ಯೂ’ ಕರೆಯನ್ನು ಬೆಂಬಲಿಸುವಂತೆ ಚರ್ಚ್, ಮಸೀದಿ ಮುಖ್ಯಸ್ಥರ ಜತೆಗೂ ಮಾತುಕತೆ ನಡೆಸಿದ್ದು, ಅವರೂ ಸಹ ಜನರ ಹಿತದೃಷ್ಟಿಯಿಂದ ಪ್ರಧಾನಿ ಕರೆಗೆ ಗೌರವ ನೀಡುವರೆಂಬ ವಿಶ್ವಾಸವಿದೆ ಎಂದರು. ಆದರೆ ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್, ಮೊದಲಾದ ತುರ್ತು ಸೇವೆಗಳು ಅಂದು ಎಂದಿನಂತೆ ಲಭ್ಯವಿರುತ್ತವೆ ಎಂದರು. ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ, ಹೋಟೆಲ್ ಮಾಲೀಕರ ಸಂಘದ ಸಿ.ನಾರಾಯಣಗೌಡ, ಸೇಫ್ ವೀಲ್‍ನ ಬಿ.ಎಸ್. ಪ್ರಶಾಂತ್, ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಸುದ್ದಿಗೋಷ್ಠಿಯಲ್ಲಿದ್ದರು.