ಕೆಆರ್ ನಗರ ಯುವಕನಿಗೆ ಕೊರೊನಾ ಸೋಂಕು

ಮೈಸೂರು,ಮೇ 21(ಎಂಟಿವೈ)- ಮುಂಬೈನಿಂದ ಹಿಂದಿರುಗಿದ ಕೆ.ಆರ್.ನಗರದ 18 ವರ್ಷದ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಇಂದು ಹೊಸದಾಗಿ ಒಂದು ಕೋವಿಡ್ -19 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಮುಂಬೈ ನಲ್ಲಿ ಕೆಲಸ ಮಾಡಿಕೊಂಡಿದ್ದ ಕೆ.ಆರ್.ನಗರ ಮೂಲದ ಯುವಕನಿಗೆ ಸೋಂಕು ತಗಲಿದೆ. ಆತನನ್ನು ಭೇರ್ಯ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆಗೊಳಪಡಿಸಿ, ಅನ್ಯರಾಜ್ಯ ದಿಂದ ಬಂದ ಕಾರಣ ಕ್ವಾರಂಟೇನ್‍ನಲ್ಲಿಡಲಾಗಿತ್ತು. ಆತನೊಂದಿಗೆ ಬಂದಿದ್ದ ವ್ಯಕ್ತಿಗೆ 3 ದಿನದ ಹಿಂದೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಯುವಕನನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು
ಪಾಸಿಟಿವ್ ವರದಿ ಬಂದಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಈ ಹೊಸ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಇದರಲ್ಲಿ 90 ಮಂದಿ ಈಗಾಗಲೇ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಇಬ್ಬರಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಮುಂಬೈ ಕಾರ್ಮೋಡ ಭೀತಿ: ಮೈಸೂರು ಜಿಲ್ಲೆಯಲ್ಲಿ ಏ.29ರ ನಂತರದಲ್ಲಿ, ಅಂದರೆ ಕಳೆದ 18 ದಿನಗಳಲ್ಲಿ ಸೋಂಕಿತರು ಕಂಡು ಬಂದಿರಲಿಲ್ಲ. ಆದರೆ, ಮುಂಬೈನಿಂದ ಬಂದ ಕೆ.ಆರ್.ನಗರ ತಾಲೂಕಿನ 46 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಇರುವುದು ಮೇ 18ರಂದು ದೃಢಪಟ್ಟಿತ್ತು. ಈಗ ಮುಂಬೈನಿಂದ ಬಂದ ಮತ್ತೊಬ್ಬ ವ್ಯಕ್ತಿಗೂ (ಯುವಕ) ಸೋಂಕು ತಗಲಿರುವುದನ್ನು ತಿಳಿದ ಬಳಿಕ ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ.

3500 ಮಂದಿ: ಸೇವಾ ಸಿಂಧು ವೆಬ್‍ಸೈಟ್ ಮೂಲಕ ಮುಂಬೈ ನಿಂದ 3500ಕ್ಕೂ ಹೆಚ್ಚು ಜನರು ಮೈಸೂರು ಜಿಲ್ಲೆಗೆ ವಾಪಸಾಗಲು ನೋಂದಣಿ ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಇವರೆಲ್ಲಾ ಹಿಂದಿರುಗಿದರೆ ಮಂಡ್ಯ ಜಿಲ್ಲೆಯಂತೆಯೇ ಮೈಸೂರು ಜಿಲ್ಲೆಗೂ ಕಾರ್ಮೋಡ ಆವರಿಸಬಹುದೆಂಬ ಭೀತಿ ಎದುರಾಗಿದೆ. ಮಹಾರಾಷ್ಟ್ರ ದಲ್ಲಿ ಕೊರೊನಾ ಅಪಾಯಕಾರಿ ಹಂತಕ್ಕೆ ತಲುಪಿದೆ. ಅಲ್ಲಿಂದ ರಾಜ್ಯಕ್ಕೆ ಅಧಿಕೃತ ಮಾರ್ಗದಲ್ಲಿ ವಾಪಸ್ಸಾದ ಎಲ್ಲರೂ ಕ್ವಾರಂಟೇನ್ ನಲ್ಲಿಯೇ ಇದ್ದರೆ ಸಮಸ್ಯೆ ಉಂಟಾಗದು. ಆದರೆ ಕಳ್ಳದಾರಿಯಲ್ಲಿ ಬಂದು ಗ್ರಾಮ ಸೇರಿಕೊಂಡರೆ ಇಡೀ ಜಿಲ್ಲೆ ಭಾರೀ ಬೆಲೆ ತೆರಬೇಕಾಗು ತ್ತದೆ. ಯಾವುದೇ ಗ್ರಾಮಕ್ಕೆ ಮುಂಬೈನಿಂದ ಯಾರಾದರೂ ಹಿಂದಿರು ಗಿದರೆ ಅವರ ಮೇಲೆ ಹದ್ದಿನ ಕಣ್ಣಿಡುವ ಸವಾಲು ಗ್ರಾ.ಪಂ ಕಾರ್ಯದರ್ಶಿ, ಪಿಡಿಓ, ಆಶಾ ಕಾರ್ಯಕರ್ತೆಯರಿಗೆ ಎದುರಾಗಿದೆ.