ಕೊರೊನಾ ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ

ಹನೂರು, ಮೇ 3-ಕೊರೊನಾ ಸೋಂಕಿನ ಕೊಂಡಿಯನ್ನು ಕಳಚುವ ದಿಸೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ವಹಿಸಿ ಎಂದು ಶಾಸಕ ಆರ್.ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕೊವಿಡ್-19 ತಡೆಗಟ್ಟುವ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕಿನ ಕೊಂಡಿಯನ್ನು ಕಳಚದೇ ಹೊರತು ಸೋಂಕನ್ನು ತಹಬದಿಗೆ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಗಳ ಮನೆ ಸುತ್ತ ಯಾರೂ ಹೊರ ಬಾರದಂತೆ ಟೇಪ್ ಅಳವಡಿಸುವುದು ಹಾಗೂ ಕಂಟೈನ್‍ಮೆಂಟ್ ಜೋನ್ ಎಂದು ಅರಿವು ಮೂಡಿಸುವ ಫಲಕಗಳನ್ನು ಅಳವಡಿಸುವ ಕೆಲಸ ವನ್ನು ಮಾಡಬೇಕು. ಸೋಂಕಿತರು ಹೊರ ಬಾರದಂತೆ ಆಹಾರ ಪದಾರ್ಥಗಳನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದ ಅವರು ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರನ್ನು ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ದಂಡ ವಿಧಿಸುವುದು ಸೇರಿದಂತೆ ಒಂದೆರಡು ದಿನಗಳ ಮಟ್ಟಿಗೆ ವಾಹನವನ್ನು ಜಪ್ತಿ ಮಾಡುವ ಮೂಲಕ ಎಚ್ಚರಿಕೆ ನೀಡಬೇಕು ಎಂದರು.

ಸಭೆಯಲ್ಲಿ ವೈದ್ಯಾಧಿಕಾರಿ ಡಾ.ಪ್ರಕಾಶ್ ಅವರಿಂದ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆದರು. ನೂತನವಾಗಿ ಕೊರೊನಾ ಸೋಂಕಿತರಿಗೆ ಕೇಂದ್ರಗಳನ್ನು ತೆರೆಯುವುದಾದರೇ, ಇಲ್ಲಿಗೆ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಉಂಟಾಗುವುದಿಲ್ಲವೇ ಎಂದು ವೈದ್ಯಾ ಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕುತ್ತರಿಸಿದ ವೈದ್ಯಾಧಿಕಾರಿ ಪ್ರಕಾಶ್, ಬಿಎಸ್‍ಇ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಸಂಪ ನ್ಮೂಲಗಳಿಂದ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಪಟ್ಟಣದಲ್ಲಿ ಕೋವಿಡ್ ಸಂಬಂಧ ಮುಂಜಾಗ್ರತ ಕ್ರಮಗಳ ಬಗ್ಗೆ ಪಪಂ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಪೊಲೀಸ್ ಚೌಕಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಸೆಡ್ ನಿರ್ಮಾಣ ಹಾಗೂ ಕುಡಿಯುವ ನೀರನ್ನು ಒದಗಿಸಲು ಕ್ರಮ ವಹಿಸಬೇಕೆಂದು ಶಾಸಕರು ಪಪಂ ಮುಖ್ಯಾಧಿಕಾರಿಗೆ ತಿಳಿಸಿದರು. ತುರ್ತು ಸಮಯಗಳಲ್ಲಿ ವಾಹನ ಸೌಲಭ್ಯ, ವೆಂಟಿಲೇಟರ್, ವ್ಯಾಕ್ಸಿನ್ ಲಸಿಕೆ ಇನ್ನಿತರೆ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಈ ಸಂದರ್ಭ ದಲ್ಲಿ ತಹಶೀಲ್ದಾರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ತಾ.ಪಂ.ಸಹಾಯಕ ನಿರ್ದೇಶಕ ಮಹಾದೇವಸ್ವಾಮಿ, ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್, ಸಿಬ್ಬಂದಿ ರಾಘವೇಂದ್ರ ಇದ್ದರು.