ಭಾರತದ ರೂಪಾಂತರಿ ಕೊರೊನಾ ವೈರಸ್ ಕನಿಷ್ಠ 17 ದೇಶಗಳಲ್ಲಿ ಪತ್ತೆ

ಜಿನಿವಾ,ಏ.28-ಕೊರೊನಾ ಸೋಂಕು ಹೆಚ್ಚಾಗಿ 2ನೇ ಅಲೆ ವ್ಯಾಪಕವಾಗಿ ಹರಡಲು ಕಾರಣವಾಗಿರುವ ಭಾರತದಲ್ಲಿ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ 12ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ. ಕೋವಿಡ್-19ನ ಬಿ.1.617 ಕೊರೊನಾ ರೂಪಾಂತರಿ ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ನಿನ್ನೆಯ ಹೊತ್ತಿಗೆ ಕನಿಷ್ಠ 17 ದೇಶಗಳಲ್ಲಿ 1,200ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ, ಇದು ಬೇರೆ ರೂಪಾಂತರಿ ಕೊರೊನಾಕ್ಕಿಂತ ಹೆಚ್ಚು ಅಪಾಯ ಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರ ಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವರದಿಯಲ್ಲಿ ತಿಳಿಸಿದೆ.

ಕೊರೊನಾ ರೂಪಾಂತರಿ ಮೂಲ ಕೊರೊನಾ ವೈರಸ್‍ಗಿಂತಲೂ ಹೆಚ್ಚು ಅಪಾಯ ಕಾರಿಯಾಗಿದ್ದು, ಅತಿ ವೇಗವಾಗಿ ಜನರಿಂದ ಜನರಿಗೆ ಹರಡುತ್ತಿದೆ. ಲಸಿಕೆಯಿಂದ ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ಪಡೆಯಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಕೊರೊನಾ ರೂಪಾಂತರಿ ಎಷ್ಟು ವೇಗವಾಗಿ ಹಬ್ಬುತ್ತಿದೆಯೆಂದರೆ ನಿನ್ನೆ ಒಂದೇ ದಿನ 3 ಲಕ್ಷದ 50 ಸಾವಿರ ಹೊಸ ಕೇಸುಗಳು ದಾಖಲಾಗಿವೆ. ವಿಶ್ವದಲ್ಲಿ ಸದ್ಯ 147.7 ಮಿಲಿಯನ್ ಕೇಸುಗಳಿವೆ. ಜಗತ್ತಿನಾದ್ಯಂತ ಕೊರೊನಾ ವೈರಸ್‍ಗೆ 3.1 ಮಿಲಿಯನ್‍ಗಿಂತಲೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಬಿ.1.617 ಕೊರೊನಾ ರೂಪಾಂತರಿ ಮತ್ತು ಬೇರೆ ರೂಪಾಂತರಿ ಕೊರೊನಾ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆಯಿದ್ದು, ಅವುಗಳು ಹೇಗೆ ಹಬ್ಬುತ್ತಿವೆ, ಅವುಗಳ ಹರಡುವಿಕೆಯ ಪರಿಣಾಮವೇನು, ತೀವ್ರತೆ, ಸೋಂಕಿನ ಅಪಾಯಗಳನ್ನು ತುರ್ತಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.