ಕೊರೋನಾ ಪೀಡಿತರಿಗೆ ವಿಶೇಷ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು, ಮಾ.13-ಕೊರೋನಾ ವೈರಸ್ ಪೀಡಿತರ ಚಿಕಿತ್ಸೆಗೆ ಪ್ರತ್ಯೇಕವಾಗಿ ಸುಸಜ್ಜಿತ ಆಸ್ಪತ್ರೆಯನ್ನು ಬೆಂಗಳೂರಿ ನಲ್ಲಿ ಮೀಸಲಿಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಕೊರೋನಾ ಪೀಡಿತರ ಚಿಕಿತ್ಸೆಗೆಂದು ನುರಿತ ತಜ್ಞರನ್ನು ನೇಮಕ ಮಾಡಲಾಗುವುದು. ನಗರದಲ್ಲಿ ಯಾವ ಆಸ್ಪತ್ರೆ ಎಂದು ಇನ್ನೂ ಗುರುತಿಸಿಲ್ಲ. ಅಲ್ಲಿ 300ರಿಂದ 450 ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗುವುದು. ಪ್ರತ್ಯೇಕ ಆಸ್ಪತ್ರೆ ಮಾಡುವ ಮೂಲಕ ವೈರಸ್ ಹಬ್ಬುವುದನ್ನು ತಡೆಗಟ್ಟ ಬಹುದು ಎಂದು ಹೇಳಿದರು. ಬೆಂಗಳೂರಿನಲ್ಲಿ ಕೊರೋನಾ ಪೀಡಿತರಿಗೆ ಆಶ್ರಯ ಕಲ್ಪಿಸಲು ಆಕಾಶ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಮತ್ತೊಂದು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು. ಆರೋಗ್ಯ ಇಲಾಖೆ ವಕ್ತಾರ ಪಂಕಜ್ ಕುಮಾರ್ ಪಾಂಡೆ, ಯಾರಿಗಾದರೂ ಶೀತ, ನೆಗಡಿ, ಜ್ವರ ಬರುತ್ತಿದ್ದರೆ ಅಥವಾ ಕೊರೋನಾ ಪೀಡಿತ ದೇಶಗಳಿಗೆ ಹೋಗಿ ಬಂದಿದ್ದರೆ ಅಥವಾ ಅಂತಹ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದರೆ 104 ಸಂಖ್ಯೆಗೆ ಕರೆ ಮಾಡಿದರೆ ಅಂತಹವರನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ಅವರಿಗೆ ಹೊರರೋಗಿ ವಿಭಾಗದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಸರ್ಕಾರದಿಂದಲೇ ನೀಡಲಾಗುವುದು ಎಂದರು.

ವಿದೇಶಗಳಿಗೆ ಹೋದ ಉದ್ಯೋಗಿಗಳ ಬಗ್ಗೆ ಮಾಹಿತಿ ಕೊಡಿ: ಫೆಬ್ರವರಿ 21ರ ನಂತರ ವಿದೇಶಕ್ಕೆ ಹೋದ ನಿಮ್ಮ ಉದ್ಯೋಗಿಗಳ ಬಗ್ಗೆ ಮಾಹಿತಿ ನೀಡಿ ಎಂದು ಐಟಿ-ಬಿಟಿ ಕಂಪೆನಿಗಳಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಯಾವ ದೇಶಕ್ಕೆ,ಯಾವಾಗ ಹೋಗಿದ್ದರು ಎಂದು ಹೇಳಿದರೆ ರಾಜ್ಯ ಸರ್ಕಾರದ ವತಿಯಿಂದಲೇ ಕೊರೋನಾ ವೈರಸ್ ನ ರೋಗಲಕ್ಷಣಗಳ ಬಗ್ಗೆ ತಪಾಸಣೆ ಮಾಡಲಾಗುತ್ತದೆ. ಈ ಕುರಿತು ಕುಟುಂಬ ಕಲ್ಯಾಣ ಇಲಾಖೆ ನಿನ್ನೆ ಐಟಿ-ಬಿಟಿ ಮತ್ತು ಉತ್ಪಾದನೆ ವಲಯಗಳ ಕಂಪೆನಿಗಳ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದೆ. ಸಾಧ್ಯವಾದಷ್ಟು ಇನ್ನು ಕೆಲ ಸಮಯಗಳವರೆಗೆ ವಿದೇಶಗಳಿಗೆ ಪ್ರಯಾಣ ಮಾಡದಂತೆ ಕೂಡ ಕಂಪೆನಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಯಡಿ ಕೊರೋನಾ ರೋಗಿಗಳ ಆಸ್ಪತ್ರೆ ವೆಚ್ಚವನ್ನು ಭರಿಸಲು 20 ವಿಧಾನಗಳನ್ನು ಸರ್ಕಾರ ಅನುಸರಿಸುತ್ತಿದೆ. ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ವಿಮಾನಗಳ ಮೂಲಕ ತರಲಾಗುತ್ತಿದೆ. ನೆಗೆಟಿವ್ ಕಂಡು ಬಂದರೆ ಅದನ್ನು ರಸ್ತೆ ಸಾರಿಗೆ ಮೂಲಕ ವಾಪಸ್ಸು ಕಳುಹಿ ಸಲಾಗುತ್ತದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.