ಮೈಸೂರು,ಜೂ.15-ಕೊರೊನಾ ವೈರಸ್ ಆರ್ಭಟದ ಹಿನ್ನೆಲೆಯಲ್ಲಿ ಈ ಬಾರಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಶುಕ್ರವಾರ ಆಚರಣೆ ಮಾಡದಿರುವುದೇ ಸೂಕ್ತ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಲಹೆ ನೀಡಿದೆ. ಹೀಗಾಗಿ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಆಷಾಢ ಜಾತ್ರೆ ನಡೆಯುವುದೇ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ.
ನಾಡಿನ ಅಧಿದೇವತೆ ಚಾಮುಂಡಿ ದೇವಾಲಯದಲ್ಲಿ ಆಷಾಢ ಮಾಸಾಚರಣೆ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಈ ಬಾರಿ ಆಷಾಢ ಮಾಸಾಚರಣೆಯನ್ನು ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಕೈ ಬಿಡುವುದೇ ಸೂಕ್ತ ಎಂದು ಸಲಹೆ ನೀಡಲಾಗಿದೆ. ಆದರೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಮತ್ತೊಂದು ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಹೊರಬೀಳಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜಿಲ್ಲೆಗೆ ಇತರೆ ರಾಜ್ಯದಿಂದ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸದ್ಯ 20 ಸಕ್ರಿಯ ಪ್ರಕರಣಗಳು ಇವೆ. 1500ಕ್ಕೂ ಹೆಚ್ಚು ಜನ ಕ್ವಾರಂಟೈನ್‍ನಲ್ಲಿ ಇದ್ದಾರೆ. ಎಪ್ಪತ್ತು ಮಂದಿ ಮಹಾರಾಷ್ಟ್ರದಿಂದ ಬಂದ ವರಾಗಿದ್ದಾರೆ. ಕೆ.ಆರ್. ನಗರದಲ್ಲಿ 50 ಜನರಿಗೆ ಟೆಸ್ಟ್ ಮಾಡಲಾಗಿತ್ತು, ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ.
ಈ ಸಂದರ್ಭದಲ್ಲಿ ಜನರು ಹಿಂದಿಗಿಂ ತಲೂ ಹೆಚ್ಚು ಮುಂಜಾಗ್ರತೆ ವಹಿಸಬೇಕು. ಹಾಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇ ಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಕೊರೊನಾ ಲಕ್ಷಣ ಇರುವವರು ಕೂಡಲೇ ಪರೀಕ್ಷೆಗೆ ಒಳಗಾಗಬೇಕು. ಅವರಿಗಾಗಿ ಉಚಿತ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಹೀಗೆ ಟೆಸ್ಟ್ ಮಾಡಿಸಿಕೊಂಡವರಿಗೆಲ್ಲಾ ಕ್ವಾರಂಟೈನ್ ಮಾಡೋದಿಲ್ಲ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ ಇರುವವರಿಗೂ ಟೆಸ್ಟ್ ಮಾಡ ಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾಹಿತಿ ನೀಡಿದರು.