ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲಾಸ್ಪತ್ರೆ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ
ತರಾತುರಿಯಲ್ಲಿ ಮನೆ ಖಾಲಿ ಮಾಡಲು ಬಾಡಿಗೆದಾರರ ಸಿದ್ಧತೆ: ಮಾಲೀಕರೊಂದಿಗೆ ಜಟಾಪಟಿ
ಮೈಸೂರು, ಏ.13(ಆರ್‍ಕೆ)- ಕೋವಿಡ್-19 ಸೋಂಕಿತ ರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರಿನ ಕೆಆರ್‍ಎಸ್ ರಸ್ತೆಯ ಮೇಟಗಳ್ಳಿ ಬಳಿ ಇರುವ ಜಿಲ್ಲಾ ಆಸ್ಪತ್ರೆಯ ಸುತ್ತಮುತ್ತಲ ಬಡಾವಣೆ ನಿವಾಸಿಗಳಲ್ಲಿ ಆತಂಕ ಪರಿಸ್ಥಿತಿ.
ಈ ಮೊದಲು ಕೆಆರ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ರಕ್ತ ಹಾಗೂ ಗಂಟಲು ದ್ರವ ಪರೀಕ್ಷಿಸಿ, ಸೋಂಕು ಖಚಿತಪಟ್ಟವರಿಗೆ ಅಲ್ಲಿಯೇ ವ್ಯವಸ್ಥೆ ಮಾಡಿದ್ದ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗು ತ್ತಿತ್ತು. ಆದರೆ ಅಗತ್ಯ ಮುನ್ನೆಚ್ಚರಿಕೆ ದೃಷ್ಟಿಯಿಂದ ಮೈಸೂರು ಜಿಲ್ಲಾಡಳಿತ ಇತ್ತೀಚೆಗಷ್ಟೇ ಉದ್ಘಾಟನೆಗೊಂಡು, ಇನ್ನು ಕಾರ್ಯಾರಂಭವಾಗದೇ, ಖಾಲಿ ಇದ್ದ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿ, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದವರನ್ನು ಸ್ಥಳಾಂತರಿಸಿತ್ತು. ಅಲ್ಲದೆ ನಂತರ ಹೊಸದಾಗಿ ಸೋಂಕು ದೃಢಪಟ್ಟವರನ್ನು ಇಲ್ಲಿಯೇ ಚಿಕಿತ್ಸೆಗೊಳಪಡಿಸಲಾಗಿದೆ. ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚು ತ್ತಿರುವುದು ಹಾಗೂ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿರುವುದರಿಂದ ಆಸ್ಪತ್ರೆ ಸುತ್ತಮುತ್ತ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ವದಂತಿ ಹರಡಿದೆ. ಹಾಗಾಗಿ ಆಸ್ಪತ್ರೆ ಸುತ್ತಮುತ್ತಲ ಬಡಾವಣೆ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.
ವೈದ್ಯರು, ನರ್ಸ್‍ಗಳು, ಆಯಾಗಳು, ವಾರ್ಡ್ ಬಾಯ್ ಗಳು ಹಾಗೂ ಆಂಬುಲೆನ್ಸ್ ಸಂಚಾರ ಭರಾಟೆಯಿಂದ ಸಹಜವಾಗಿ ಆಸ್ಪತ್ರೆ ಸುತ್ತಮುತ್ತಲ ನಿವಾಸಿಗಳು ಆತಂಕ ಗೊಂಡಿದ್ದಾರೆ. ಕೋವಿಡ್-19 ಆಸ್ಪತ್ರೆ ಕಾಂಪೌಂಡ್‍ಗೆ ಹೊಂದಿಕೊಂಡಂತಿರುವ ಲೋಕನಾಯಕನಗರ, ಜಯದೇವನಗರ, ಭೈರವೇಶ್ವರನಗರ, ಮೇಟಗಳ್ಳಿ, ಸಂಜೀವಿನಿ ಸರ್ಕಲ್, ಬಸವನಗುಡಿ ಹಾಗೂ ನಾರ್ತ್ ಆಫ್ ಕುಂಬಾರಕೊಪ್ಪಲು ಸುತ್ತಲಿನ ಇನ್ನಿತರೆ ಬಡಾ ವಣೆಗಳಲ್ಲಿ ವಾಸಿಸುತ್ತಿರುವ ಬಾಡಿಗೆದಾರರು ಮನೆ ಖಾಲಿ ಮಾಡಿಕೊಂಡು ದೂರದ ಬಡಾವಣೆಗಳಿಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆ.
ಕಳೆದ ಒಂದು ವಾರದಿಂದ ಹಲವರು ಮನೆ ಖಾಲಿ ಮಾಡುತ್ತೇವೆ, ಮುಂಗಡ ಹಣ ವಾಪಸ್ ಕೊಡಿ ಎಂದು ಮನೆ ಮಾಲೀಕರಿಗೆ ದುಂಬಾಲು ಬಿದ್ದಿದ್ದಾರೆ. ಕೆಲವರು ತಮ್ಮ ಊರುಗಳಿಗೆ ಹೋಗುತ್ತೇವೆ. ಚಿಕ್ಕ ಚಿಕ್ಕ ಮಕ್ಕಳು, ವಯಸ್ಸಾದ ತಂದೆ-ತಾಯಿ ಇದ್ದಾರೆ. ಒಂದು ವೇಳೆ ಕೊರೊನಾ ಸೋಂಕು ಬಂದರೆ ಗತಿ ಏನು? ಎಂದು ಭಯಭೀತರಾಗಿದ್ದಾರೆ.
ಬಾಡಿಗೆ ಮತ್ತು ಲೀಸ್ ಕರಾರು ಒಪ್ಪಂದ ಮುಗಿಯು ವವರೆಗೆ ಇರಲೇಬೇಕು. ಈಗ ಲಾಕ್‍ಡೌನ್ ಆಗಿರು ವುದರಿಂದ ಎಲ್ಲಾ ವ್ಯವಹಾರ ಸ್ಥಗಿತಗೊಂಡಿದೆ. ಹಣ ಹೊಂದಿಸಲು ಕಷ್ಟವಾಗಿದೆ ಎನ್ನುತ್ತಿರುವ ಮಾಲೀಕರು, ನೀವು ಖಾಲಿ ಮಾಡಲೇಬೇಕೆಂದಿದ್ದರೆ ಲಾಕ್‍ಡೌನ್ ಸಡಿಲಗೊಳ್ಳುವವರೆಗೆ ಅಡ್ವಾನ್ಸ್ ಹಣವನ್ನು ಹಿಂದಿರುಗಿ ಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಬಾಡಿಗೆ ದಾರರಿಗೆ ತಲೆ ನೋವಾಗಿ ಪರಿಣಮಿಸಿದೆ.
ಈ ಕುರಿತಂತೆ ಬಾಡಿಗೆದಾರರು ಮತ್ತು ಮಾಲೀಕರ ನಡುವೆ ವಾಕ್ಸಮರಗಳೂ ನಡೆಯುತ್ತಿದ್ದು, ಇಬ್ಬರಿಗೂ ತಲೆ ನೋವಾಗಿದೆ. ಮೊದಲೇ ಲಾಕ್‍ಡೌನ್‍ನಿಂದ ಆತಂಕಗೊಂಡಿರುವ ಅಲ್ಲಿನ ಜನರಿಗೆ ಕೋವಿಡ್-19 ಆಸ್ಪತ್ರೆ ಮತ್ತೊಂದು ಸಮಸ್ಯೆ ತಂದೊಡ್ಡಿದೆ.
ಈ ನಡುವೆ ಆಸ್ಪತ್ರೆ ಕಟ್ಟಡದ ಹಿಂಭಾಗ ಕಾಂಪೌಂಡ್ ಪಕ್ಕದಲ್ಲಿ ಇರಿಸಲಾಗಿರುವ ಡಸ್ಟ್‍ಬಿನ್‍ಗಳಲ್ಲಿ ಆಸ್ಪತ್ರೆಯಲ್ಲಿ ಬಳಸಿದ ಮಾಸ್ಕ್, ಹ್ಯಾಂಡ್ ಗ್ಲೌವ್ಸ್, ಹೆಡ್‍ಕವರ್ ಹಾಗೂ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ತಂದು ಹಾಕು ತ್ತಿದ್ದು, ಡಸ್ಟ್‍ಬಿನ್ ಸುತ್ತ ಬಿಸಾಡಿರುವುದೂ ಆಸ್ಪತ್ರೆ ಕಾಂಪೌಂಡಿಗೆ ಹೊಂದಿಕೊಂಡಂತಿರುವ ಲೋಕನಾಯಕ ನಗರ ಬಡಾವಣೆ ನಿವಾಸಿಗಳಿಗೆ ದಿಗಿಲುಂಟಾಗಿದೆ.
ಈ ಬಡಾವಣೆಯಲ್ಲಿ ಈಗಾಗಲೇ 18 ಕುಟುಂಬ ಗಳು ಮನೆ ಖಾಲಿ ಮಾಡಿಕೊಂಡು ಹೆಬ್ಬಾಳು ಬಡಾ ವಣೆಯ ವಿವಿಧ ಪ್ರದೇಶಗಳಿಗೆ ಸ್ಥಳಾಂತರವಾಗಿ ದ್ದಾರೆ. ಆಸ್ಪತ್ರೆ ಆವರಣದಲ್ಲಿ ಶವಾಗಾರವೂ ಇರುವುದ ರಿಂದ ಹಾಗೂ ಸದಾ ಆಂಬುಲೆನ್ಸ್, ಆರೋಗ್ಯ ಇಲಾಖೆ ವಾಹನಗಳು ಓಡಾಡುತ್ತಿರುವುದು ಅಲ್ಲಿನ ನಿವಾಸಿಗಳು ಆತಂಕಗೊಳ್ಳಲು ಕಾರಣವಾಗಿದೆ.