ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಎನ್.ಆರ್.ಸಮೂಹದಿಂದ ಕ್ರಿಕೆಟ್ ಪ್ರತಿಭಾನ್ವೇಷಣೆ

  •  240 ಪಟುಗಳು ಹಾಜರು
  • ಇವರಲ್ಲಿ 68 ಸ್ಪಿನ್ನರ್, 70 ಬ್ಯಾಟ್ಸ್‍ಮನ್, 82 ಆಲ್‍ರೌಂಡರ್ಸ್, 15 ವಿಕೆಟ್ ಕೀಪರ್ಸ್

ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್-2018ರ ಕ್ರಿಕೆಟ್ ಪಂದ್ಯಾವಳಿಯ ಹರಾಜು ಪ್ರಕ್ರಿಯೆಗೆ ಉದಯೋನ್ಮುಖ ಆಟಗಾರರನ್ನು ಶಿಫಾರಸ್ಸು ಮಾಡುವ ಸಲುವಾಗಿ ಮೈಸೂರು ವಾರಿಯರ್ಸ್ ತಂಡದ ಮಾಲೀಕತ್ವ ಹೊಂದಿರುವ ಎನ್‍ಆರ್ ಸಮೂಹ ಬುಧವಾರ ನಡೆಸಿದ ಕ್ರಿಕೆಟ್ ಪ್ರತಿಭಾನ್ವೇಷಣೆಯಲ್ಲಿ 240 ಪಟುಗಳು ಪಾಲ್ಗೊಂಡಿದ್ದರು.

ಮೈಸೂರಿನ ಮಾನಸ ಗಂಗೋತ್ರಿಯ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆದ ಪ್ರತಿಭಾನ್ವೇಷಣೆ ಪಂದ್ಯದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಿಂದ ಮಾತ್ರವಲ್ಲದೆ, ತುಮಕೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 240 ಕ್ರಿಕೆಟ್ ಪಟುಗಳು ಪಾಲ್ಗೊಂಡು, ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದಲ್ಲಿ (ಕೆಎಸ್‍ಸಿಎ) ನೋಂದಣಿ ಮಾಡಿಕೊಂಡಿರುವ 240 ಮಂದಿ ಉದಯೋನ್ಮುಖ ಆಟಗಾರರಲ್ಲಿ 68 ಸ್ಪಿನರ್‍ಗಳು, 70 ಬ್ಯಾಟ್ಸ್‍ಮನ್‍ಗಳು, 82 ಆಲ್ ರೌಂಡರ್‍ಗಳು ಮತ್ತು 15 ವಿಕೆಟ್ ಕೀಪರ್‍ಗಳು ತಮ್ಮ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಿದರು. ಮೈಸೂರು ವಾರಿಯರ್ಸ್ ತಂಡದ ಮುಖ್ಯ ತರಬೇತುದಾರ ಎಸ್.ಆರ್.ಮುರಳೀಧರ್ ನೇತೃತ್ವದಲ್ಲಿ ತರಬೇತುದಾರರು ಆಟಗಾರರ ಪ್ರತಿಭಾ ಪರೀಕ್ಷೆ ನಡೆಸಿದರು.

ಜುಲೈ 15ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲೂ ಎನ್‍ಆರ್ ಸಮೂಹ ಇದೇ ರೀತಿಯ ಪ್ರತಿಭಾನ್ವೇಷಣೆ ನಡೆಸಿದ್ದು, ಬೆಂಗಳೂರು ಮತ್ತು ಮೈಸೂರಿನ ಪ್ರತಿಭಾನ್ವೇಷಣೆಯಲ್ಲಿ ಒಟ್ಟಾರೆ 500 ಯುವ ಉತ್ಸಾಹಿ ಕ್ರಿಕೆಟ್ ಆಟಗಾರರು ಪಾಲ್ಗೊಂಡಿದ್ದರು. ಇವರಲ್ಲಿ ಆಯ್ಕೆಯಾಗುವ ಇಬ್ಬರು ಆಟಗಾರರು ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕೆಪಿಎಲ್ 2018ರ ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇಂದಿನ ಪ್ರತಿಭಾನ್ವೇಷಣೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಮೈಸೂರು ವಾರಿಯರ್ಸ್‍ನ ಮಾಲೀಕ ಅರ್ಜುನ್ ರಂಗ ಅವರು, ಈ ಬಾರಿಯ ಪ್ರತಿಭಾನ್ವೇಷಣೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಭಾಗಗಳಿಂದ ಸುಮಾರು 500 ಆಕಾಂಕ್ಷಿಗಳು ಆಗಮಿಸಿದ್ದರು. ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ಕ್ರಿಕೆಟ್ ಪ್ರತಿಭೆಗಳಿದ್ದು, ಮೈಸೂರು ವಾರಿಯರ್ಸ್ ತಂಡದಲ್ಲಿ ಅದ್ಭುತ ಆಟಗಾರರು ಆಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ ಕೆಲ ವರ್ಷಗಳಲ್ಲಿ ತನ್ನ ಪ್ರಮುಖ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಮೂಲಕ ಎನ್‍ಆರ್ ಸಮೂಹವು ಭಾರತದಲ್ಲಿ ಕ್ರಿಕೆಟ್ ಜೊತೆಗೆ ಸಹಯೋಗ ಹೊಂದಿದ ಪ್ರಮುಖ ಬ್ರಾಂಡ್‍ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಜೊತೆಗೆ ಪ್ರತಿ ವರ್ಷ ಹಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರಮುಖ ಪ್ರಾಯೋಜಕರಾಗಿ ಗುರುತಿಸಿಕೊಂಡಿದ್ದು, ವ್ಯಾಪಕವಾಗಿ ಜನಪ್ರಿಯತೆ ಪಡೆದಿರುವ `ಪ್ರೇ ಫಾರ್ ಇಂಡಿಯಾ’ (ಭಾರತಕ್ಕಾಗಿ ಪ್ರಾರ್ಥಿಸಿ) ಅಭಿಯಾನ ಸಹ ಪ್ರಾರಂಭಿಸಿದೆ ಎಂದು ತಿಳಿಸಿದರು.