ಮರಿಮಲ್ಲಪ್ಪ ಪಿಯು ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ವೇದಿಕೆಗೆ ಚಾಲನೆ

ಮೈಸೂರು: ಮೈಸೂರಿನ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ವತಿಯಿಂದ ಗುರುವಾರ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗೆ ಚಾಲನೆ ನೀಡಲಾಯಿತು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಸಾಧನೆ ಮಾಡಿ, ತಮ್ಮ ಪ್ರತಿಭೆ ಮೆರೆದಿರುವ ಯುವಕರ ಪಡೆಯೇ ನಮ್ಮ ದೇಶದಲ್ಲಿದೆ. ಆದರೆ ಇಂದಿನ ಪೈಪೋಟಿ ಯುಗದಲ್ಲಿ ಯುವ ಜನಾಂಗ ಅನೇಕ ಒತ್ತಡಗಳಿಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಂತಹುದೇ ಪೈಪೋಟಿಯನ್ನು ಎದುರಿಸಿ ಗೆಲ್ಲುವ ಛಲ ಯುವಕರಲ್ಲಿರಬೇಕು. ಸೋತಿದ್ದಕ್ಕೆ ಸೊರಗಿ ಬೇಸರಗೊಳ್ಳದೆ ಮುನ್ನುಗ್ಗುವ ಛಲ ಹೊಂದಿರಬೇಕಾದುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಸಹನೆ, ತಾಳ್ಮೆಯ ಗುಣ ಬೆಳೆಸಿಕೊಂಡು, ಒತ್ತಡಗಳಿಂದ ಮುಕ್ತರಾಗಲು ತಿಳಿಸಿದರು.

ಇದಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಪ್ರಥಮ ಪಿಯುಸಿ, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮರಿಮಲ್ಲಪ್ಪ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಎಸ್.ಪರಶಿವಯ್ಯ ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ, ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಪ್ರಾಂಶುಪಾಲ ಬಿ.ಆರ್.ನೀಲಕಂಠ, ಉಪ ಪ್ರಾಂಶುಪಾಲರಾದ ಎಂ.ಎಎಸ್.ವಿಜಯಾ, ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.