ದಸರಾ ಜಂಬೂಸವಾರಿಯಿಂದ ದೂರವುಳಿಯಲಿದೆ ಗರ್ಭಿಣಿ `ವರಲಕ್ಷ್ಮಿ’ಇನ್ನೂ ಒಂದು ವಾರ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲು ನಿರ್ಧಾರ

ಮೈಸೂರು, ಸೆ.13(ಎಂಟಿವೈ)- ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಂಬಾರಿ ಅರ್ಜುನ ನೇತೃತ್ವದ ಗಜಪಡೆಯೊಂದಿಗೆ ಆಗಮಿಸಿರುವ `ವರಲಕ್ಷ್ಮಿ’ ಗರ್ಭಿಣಿ ಯಾಗಿರುವ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆಯಿಂದ ದೂರ ವುಳಿಯುವುದು ಖಚಿತವಾಗಿದ್ದು, ಇನ್ನೊಂದು ವಾರ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದ ಬಳಿಕ ಶಿಬಿರಕ್ಕೆ ಕಳಿಸಲಾಗುತ್ತದೆ. ಆನೆಗಳ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗಿತ್ತು. ಈ ವೇಳೆ ವರಲಕ್ಷ್ಮಿ ಮೂರ್ನಾಲ್ಕು ತಿಂಗಳ ಗರ್ಭಿಣಿ ಎಂದು ಭಾವಿಸ ಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವರಲಕ್ಷ್ಮಿಗೆ 10 ಅಥವಾ 11 ತಿಂಗಳು ತುಂಬಿರಬಹು ದೆಂಬ ಗೊತ್ತಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಡೆಸಿದ ಸಿಡಿಮದ್ದಿನ ತಾಲೀಮಿಗೆ ವಿನಾಯಿತಿ ನೀಡಲಾಗಿತ್ತು. ಆನೆಗಳ ಗರ್ಭಾವಧಿ 18 ತಿಂಗಳಾಗಿದ್ದು, 15 ತಿಂಗಳು ಪೂರ್ಣಗೊಳ್ಳುವವರೆಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ವರಲಕ್ಷ್ಮಿಗೆ 63 ವರ್ಷ ವಯಸ್ಸಾಗಿದ್ದು, ಮತ್ತಿಗೋಡು ಶಿಬಿರದ ವಾಸಿಯಾಗಿದೆ. ಮಾವುತ ಜೆ.ಕೆ.ರವಿ, ಕಾವಾಡಿ ಮಾದೇಶ ಆರೈಕೆಯಲ್ಲಿದ್ದಾಳೆ. 2.46 ಮೀಟರ್ ಎತ್ತರ, 3.34 ಮೀಟರ್ ಉದ್ದವಿರುವ ಈ ಆನೆ 3150 ಕೆ.ಜಿ. ತೂಕ ಹೊಂದಿದೆ. ಸಾಧು ಸ್ವಭಾವದ್ದಾಗಿದ್ದು, 1977ರಲ್ಲಿ ಕಾಕನ ಕೋಟೆಯಲ್ಲಿ ಸೆರೆಹಿಡಿಯಲಾಗಿತ್ತು. ಇದು 10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿದ್ದ ವರಲಕ್ಷ್ಮಿ ಈ ಬಾರಿ 11ನೇ ವರ್ಷದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ 10 ತಿಂಗಳು ಪೂರ್ಣಗೊಂಡಿರುವು ದರಿಂದ ಇದೀಗ ವರಲಕ್ಷ್ಮೀ ಮೇಲೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳು ನಿರ್ಧ ರಿಸಿದ್ದಾರೆ.

ಕಾಡಾನೆಗಳು ಗರ್ಭ ಧರಿಸಿದ್ದಾಗಲೂ ಆಹಾರ ಅರಸಿ ದಿನಕ್ಕೆ 30ರಿಂದ 45 ಕಿ.ಮಿ ನಡೆಯು ತ್ತದೆ. ಇದರಿಂದ ವ್ಯಾಯಾಮ ಮಾಡಿದಂತಾಗುತ್ತದೆ. ವರಲಕ್ಷ್ಮಿ ಆನೆಗೆ ದಿನಕ್ಕೆ 2 ಬಾರಿ ಪೌಷ್ಟಿಕ ಆಹಾರ ನೀಡುವುದರಿಂದ ಹೊಟ್ಟೆಯಲ್ಲಿರುವ ಮರಿಗೆ ಆರೈಕೆ ಮಾಡಿದಂತಾಗು ತ್ತದೆ. ಅರಮನೆಯಿಂದ ಬನ್ನಿಮಂಟಪದವರೆಗೂ ವಾಕಿಂಗ್‍ಗೆ ಕರೆದೊಯ್ಯುವುದರಿಂದ ಆನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಈ ಹಿನ್ನೆಲೆಯಲ್ಲಿ ವರಲಕ್ಷ್ಮಿಗೆ ಇನ್ನು 1 ವಾರ ಕಾಲ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿ. ಶಿಬಿರಕ್ಕೆ ವಾಪಸ್ಸು ಕಳಿಸಲು ನಿರ್ಧರಿಸಲಾಗಿದೆ. ಈ ಹಿಂದೆಯೂ ದಸರಾ ಗಜಪಡೆಯಲ್ಲಿ ಗರ್ಭಿಣಿ ಆನೆ ಪಾಲ್ಗೊಂ ಡಿರುವ ಬಗ್ಗೆ ದಾಖಲೆಯಿವೆ. ದುರ್ಗಾಪರಮೇಶ್ವರಿ, ಸರಳ, ಚೈತ್ರ ಆನೆಯೂ ದಸರಾ ಮುಗಿಸಿ ಶಿಬಿರಕ್ಕೆ ಮರಳಿದ ಮರು ದಿನವೇ ಮರಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು.