ದಸರಾ ಗಜಪಡೆ, ಅಶ್ವಪಡೆಗೆ ಕುಶಾಲತೋಪು ತಾಲೀಮು ಯಶಸ್ವಿ

ಮೈಸೂರು,ಅ.5(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ಅಶ್ವಪಡೆಗೆ ಮಂಗಳವಾರ ಬೆಳಗ್ಗೆ ಎರಡನೇ ಹಂತದ ಕುಶಾಲ ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನೆರವೇರಿತು.

ಕಳೆದ ತಾಲೀಮಿನಲ್ಲಿ ಸಿಡಿಮದ್ದಿನ ಶಬ್ದಕ್ಕೆ ಬೆದರಿದ್ದ ಆನೆ ಮತ್ತು ಕುದುರೆಗಳು ಇಂದು ಬೆದರದೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ನವರಾತ್ರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವುದರಿಂದ ದಸರಾ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯ ನಡೆಸಲಾಗು ತ್ತಿದೆ. ಇಂದು ಬೆಳಗ್ಗೆ ಅರಮನೆ ವರಾಹ ದ್ವಾರದ ಬಳಿಯ ಕೋಟೆ ಮಾರಮ್ಮ ದೇವಾಲಯದ ಸಮೀಪ 2ನೇ ಹಂತದ ಕುಶಾಲ ತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಸಲಾಯಿತು. ಪಿರಂಗಿದಳದ 40ಕ್ಕೂ ಹೆಚ್ಚು ಸಿಬ್ಬಂದಿ 7 ಪಿರಂಗಿ ಬಳಸಿ ಮೂರು ಸುತ್ತುಗಳಲ್ಲಿ 21 ಕುಶಾಲತೋಪನ್ನು ಸಿಡಿಸಿ, ಚಾಮುಂಡೇಶ್ವರಿಗೆ ಜೈಕಾರ ಹಾಕಿದರು. ತಾಲೀಮಿನಲ್ಲಿ ಗಜಪಡೆಯ ನಾಯಕ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆ ಚೈತ್ರ, ಲಕ್ಷ್ಮೀ, ಗೋಪಾಲಸ್ವಾಮಿ, ಅಶ್ವತ್ಥಾಮ, ಧನಂಜಯ ಪಾಲ್ಗೊಂಡರೆ, ಅಶ್ವಾರೋಹಿ ದಳದ 30ಕ್ಕೂ ಕುದುರೆಗಳು ಭಾಗವಹಿಸಿದ್ದವು.

ಆನೆಗಳ ವರ್ತನೆಯಲ್ಲಿ ಚೇತರಿಕೆ: ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಆಗಮಿಸಿದ ಆನೆ ಶಿಬಿರದ ಅಶ್ವತ್ಥಾಮ, ಎರಡನೇ ಬಾರಿಗೆ ಬಂದಿರುವ ಲಕ್ಷ್ಮೀ, ಗೋಪಾಲಸ್ವಾಮಿ ಆನೆ ಸಿಡಿಮದ್ದಿನ ಶಬ್ದಕ್ಕೆ ಸಣ್ಣ ಪ್ರಮಾಣದಲ್ಲಿ ಬೆದರಿದವು. ಮೊದಲ ಸುತ್ತಿನಲ್ಲಿ ಸಿಡಿ ಮದ್ದು ತಾಲೀಮಿನ ವೇಳೆ ಅಶ್ವತ್ಥಾಮ, ಧನಂಜಯ, ಗೋಪಾಲ ಸ್ವಾಮಿ ಆನೆ ಹೆಚ್ಚಾಗಿ ಗಾಬರಿಗೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಶ್ವತ್ಥಾಮ, ಗೋಪಾಲಸ್ವಾಮಿಯನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು. ಈ ಬಾರಿ ಯಾವುದೇ ಆನೆಯನ್ನು ಮರಕ್ಕೆ ಕಟ್ಟಿ ರಲಿಲ್ಲ. ಬದಲಾಗಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ವಿಕ್ರಮ ಆನೆಯನ್ನು ಹೊರತುಪಡಿಸಿದರೆ 7 ಆನೆಗಳು ಸಿಡಿ ಮದ್ದಿನ ತಾಲೀಮಿನಲ್ಲಿ ಪಾಲ್ಗೊಂಡು ಗಮನ ಸೆಳೆದವು.

ಆನೆಗಳ ವರ್ತನೆ ಶೇ.100ರಷ್ಟು ಪರಿಪಕ್ವವಾಗಿದೆ: ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ, ಇಂದು ನಡೆದ ಎರಡನೇ ಹಂತದ ತಾಲೀಮಿನಲ್ಲಿ ಆನೆಗಳ ವರ್ತನೆ ಸುಧಾರಣೆ ಕಂಡು ಬಂದಿದೆ. ಹೊಸ ಆನೆ ಅಶ್ವತ್ಥಾಮ, ಲಕ್ಷ್ಮೀ ಹಾಗೂ ಗೋಪಾಲ ಸ್ವಾಮಿ ಸ್ವಲ್ಪ ಬೆದರಿದ್ದು ಕಂಡು ಬಂದಿತು. ಈ ಬಾರಿ ಪಿರಂಗಿ ಸಮೀಪದಲ್ಲಿಯೇ ಆನೆಗಳನ್ನು ನಿಲ್ಲಿಸಲಾಗಿತ್ತು. ಸಿಡಿಮದ್ದಿನ ಪ್ರಮಾಣ ಕಳೆದ ತಾಲೀಮಿಗಿಂತ ಇಂದು ಹೆಚ್ಚಾಗಿ ಬಳಸಿದ್ದರಿಂದ ಶಬ್ದ ಪ್ರಮಾಣ ಹೆಚ್ಚಾಗಿತ್ತು. ಆದರೂ ಆನೆಗಳ ಪರಿಸ್ಥಿತಿ ಸುಧಾ ರಣೆ ಕಂಡು ಬಂದಿರುವುದು ಸಮಾಧಾನ ತಂದಿದೆ ಎಂದರು.

ಜಂಬೂಸವಾರಿಗೆ ಎಲ್ಲಾ ಆನೆಗಳು ಸಜ್ಜಾಗಿವೆ. ಎಲ್ಲವೂ ಆರೋಗ್ಯದಿಂದ ಕೂಡಿದೆ. ಎಲ್ಲಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎಲ್ಲ ಆನೆಗಳ ತೂಕದಲ್ಲೂ ಹೆಚ್ಚಳವಾಗಿರು ವುದು ಕಂಡು ಬಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ಪ್ರದೀಪ್ ಗುಂಟಿ, ವನಿತಾ ಪ್ರಸನ್ನ, ಆರ್‍ಎಫ್‍ಓ ಕೆ.ಸುರೇಂದ್ರ, ಪಶುವೈದ್ಯ ಡಾ.ಹೆಚ್.ರಮೇಶ, ಸಹಾಯಕ ರಂಗರಾಜು, ಗುರಿಕಾರ ಅಕ್ರಮ್ ಸೇರಿದಂತೆ ಇನ್ನಿತರರು ಇದ್ದರು